ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಧಾನಿ ಮೋದಿ, ಸಿಎಂಗಳ ಚಿತ್ರ ಇರುವ ಜಾಹೀರಾತಿಗೆ ನಿರ್ಬಂಧ

ಹೊಸದಿಲ್ಲಿ, ಜ.10: ಮುಂಬರುವ ಪಂಚ ರಾಜ್ಯಗಳ ವಿಧಾನಸಭೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಚಿತ್ರ ಇರುವ ಜಾಹೀರಾತು ಫಲಕವನ್ನು ತೆರವುಗೊಳಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.
ಈ ಕಾರಣ ಫೆ.4ರಿಂದ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಐದು ರಾಜ್ಯಗಳಲ್ಲಿನ ಪೆಟ್ರೋಲ್ ಪಂಪ್‌ಗಳಲ್ಲಿ ಇರುವ ಪ್ರಧಾನಿ ಮೋದಿ ಜಾಹೀರಾತು ಫಲಕವನ್ನು ತೆರವುಗೊಳಿಸುವುದು ಅಥವಾ ಅದನ್ನು ಪರದೆಯಿಂದ ಮುಚ್ಚುವ ಅನಿವಾರ್ಯತೆಯಿದೆ.
ಪೆಟ್ರೋಲ್ ಪಂಪ್‌ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನಿ ಮೋದಿಯ ಚಿತ್ರ ಇರುವ ಜಾಹೀರಾತು ಫಲಕ ಇರುವ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಆಕ್ಷೇಪಣೆ ಸಲ್ಲಿಸಿತ್ತು.
ಇದೀಗ ಅಸ್ತಿತ್ವದಲ್ಲಿರುವ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿಯ ಸಾಧನೆಯನ್ನು ವಿವರಿಸುವ , ರಾಜಕೀಯ ಮುಖಂಡರ ಚಿತ್ರವಿರುವ ಜಾಹೀರಾತು ಫಲಕವನ್ನು ತಕ್ಷಣ ತೆರವುಗೊಳಿಸಬೇಕು ಅಥವಾ ಪರದೆಯಿಂದ ಮುಚ್ಚಬೇಕು ಎಂದು ಚುನಾವಣೆ ನಡೆಯಲಿರುವ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯದ ಉನ್ನತ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಫೆ.4ರಿಂದ ಮಾರ್ಚ್ 8ರವರೆಗೆ ಈ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ಮಾ.11ರಂದು ಮತಗಳ ಎಣಿಕೆ ನಡೆಯಲಿದೆ. ಇಲ್ಲಿ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.







