ಎಂಡೋಸಲ್ಫಾನ್ ಸಂತ್ರಸ್ಥರಿಗೆ 3 ತಿಂಗಳೊಳಗೆ ನಷ್ಟ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಆದೇಶ

ಕಾಸರಗೋಡು , ಜ.10 : ಎಂಡೋಸಲ್ಫಾನ್ ಸಂತ್ರಸ್ಥರಿಗೆ ಮೂರು ತಿಂಗಳೊಳಗೆ ನಷ್ಟ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಓರ್ವ ಸಂತ್ರಸ್ಥರಿಗೆ ತಲಾ ಐದು ಲಕ್ಷ ರೂ. ನೀಡಬೇಕು . ಕೀಟ ನಾಶಕ ಕಂಪೆನಿಗಳಿಂದ ಈ ಮೊತ್ತವನ್ನು ಸರಕಾರ ವಸೂಲು ಮಾಡಬೇಕು. ಮೊತ್ತವನ್ನು ಕಂಪೆನಿ ನೀಡದಿದ್ದಲ್ಲಿ ಕೇಂದ್ರ ಸರಕಾರದ ಮೊರೆ ಹೋಗಬಹುದು ಎಂದು ತೀರ್ಪಿನಲ್ಲಿ ತಿಳಿಸಿದೆ.
ಸಂತ್ರಸ್ಥರಿಗೆ ಅಜೀವಾವಧಿ ಚಿಕಿತ್ಸೆ , ವೈದ್ಯರ ಸೇವೆ ನೀಡಬೇಕು ಎಂದೂ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಈ ಬಗ್ಗೆ ಕಂಪೆನಿಗಳಿಗೆ ನ್ಯಾಯಾಲಯ ನೋಟಿಸ್ ಕಳುಹಿಸಿದ್ದು, ರಾಜ್ಯ ಸರಕಾರ ಅಗತ್ಯ ಕ್ರಮ ಗಳನ್ನು ಮುಂದುವರಿಸುವಂತೆ ಆದೇಶ ನೀಡಿತು.
ರಾಜ್ಯ ಸರಕಾರವು ತಲಾ ಐದು ಲಕ್ಷ ರೂ . ನಷ್ಟ ಪರಿಹಾರ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶ ನೀಡಿರುವ ಬಗ್ಗೆ ಕಂಪೆನಿ ನ್ಯಾಯಾಲಯದ ಗಮನಕ್ಕೆ ತಂದಿತ್ತು. ಆದರೆ ಸರಕಾರ ನಷ್ಟ ಪರಿಹಾರ ನೀಡಲು ಸರಕಾರ ಯಾಕೆ ವಿಳಂಬ ಉಂಟು ಮಾಡುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು.
458 ಕೋಟಿ ರೂ .ಗಳ ಪ್ಯಾಕೇಜ್ ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿರುವುದಾಗಿ ಕಂಪೆನಿ ಗಮನಕ್ಕೆ ತಂದಿದ್ದು, ಇದರಿಂದ ನಷ್ಟ ಪರಿಹಾರಕ್ಕೆ ಕೇಂದ್ರ ಸರಕಾರವನ್ನು ಸಮೀಪಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಎಂಡೋ ಸಲ್ಫಾನ್ ಉತ್ಪಾದಕ ಸಂಘಟನೆಯಾದ ಸೆಂಟ್ರಲ್ ಎನ್ವಾರ್ನ್ ಮೆಂಟ್ ಆಂಡ್ ಆಗ್ರೋ ಕೆಮಿಕಲ್ಸ್ ಗೆ ನ್ಯಾಯಾಂಗ ನಿಂದನೆಯ ಕಾರಣ ನೀಡಿ ನೋಟಿಸ್ ಕಳುಹಿಸಿದೆ.
ಈ ಕುರಿತು ಡಿ ವೈ ಎಫ್ ಐ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಾಧೀಶ ಜೆ .ಎಸ್ ಖೆಹರ್ ಅಧ್ಯಕ್ಷತೆಯ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಸಂತ್ರಸ್ಥರು ಜೀವನದುದ್ದಕ್ಕೂ ವೈಕಲ್ಯವನ್ನು ಎದುರಿಸಬೇಕಾಗಿದ್ದು , ಇದರಿಂದ ನಷ್ಟಪರಿಹಾರ ನೀಡಬೇಕೆಂದು ಡಿ ವೈ ಎಫ್ ಐ ಒತ್ತಾಯಿಸಿತ್ತು.







