ಪಾಕ್‌ನ ಬಾಬರ್ ಕ್ಷಿಪಣಿ ಪರೀಕ್ಷೆ ಕಟ್ಟುಕತೆ?

ಹೊಸದಿಲ್ಲಿ, ಜ.10: ಬಾಬರ್ ಕ್ಷಿಪಣಿ ಪರೀಕ್ಷಾ ಉಡ್ಡಯನ ಯಶಸ್ವಿಯಾಗಿದ್ದು ಇದೊಂದು ನೌಕಾ ಪರಮಾಣು ಕಾರ್ಯಕ್ರಮದಲ್ಲಿ ಮಹತ್ವದ ಮುನ್ನೆಗೆತ ಎಂದು ಪಾಕಿಸ್ತಾನ ನೀಡಿದ್ದ ಹೇಳಿಕೆ ಬರೀ ಬೊಗಳೆಯಾಗಿದ್ದು ಈ ಸಂಬಂಧ ಒದಗಿಸಿರುವ ವಿಡಿಯೋ ದೃಶ್ಯಾವಳಿ ಕಟ್ಟುಕತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಬ್‌ಮೆರೀನ್ ಒಂದರಿಂದ ಉಡಾಯಿಸಲಾದ ಈ ಕ್ಷಿಪಣಿ ನೀರಿನಿಂದ ಮೇಲಕ್ಕೆ ಚಿಮ್ಮಿ ತನ್ನ ಉದ್ದೇಶಿತ ಗುರಿಗೆ ಯಶಸ್ವಿಯಾಗಿ ಅಪ್ಪಳಿಸುವ ಬಗ್ಗೆ ಒಂದು ವಿಡಿಯೋ ದೃಶ್ಯಾವಳಿಯನ್ನೂ ಪಾಕ್ ಬಿಡುಗಡೆಗೊಳಿಸಿತ್ತು. ಆದರೆ ಈ ವಿಡಿಯೋದಲ್ಲಿ ಎರಡು ಕ್ಷಿಪಣಿಗಳು ಕಂಡು ಬಂದಿದೆ. ನೀರಿನಿಂದ ಮೇಲಕ್ಕೆ ಚಿಮ್ಮುವ ಕ್ಷಿಪಣಿ ಬೂದು ಬಣ್ಣದ್ದು. ಆದರೆ ಗುರಿಗೆ ಬಂದೆರಗುವ ಕ್ಷಿಪಣಿ ಕಿತ್ತಳೆ ಬಣ್ಣದ್ದಾಗಿದೆ.
ಪಾಕಿಸ್ತಾನ ಸೋಮವಾರ ಯಾವುದೇ ಕ್ಷಿಪಣಿ ಪರೀಕ್ಷೆ ನಡೆಸಿಲ್ಲ. ಈ ದೃಶ್ಯಾವಳಿ ಈ ಹಿಂದಿನ ಕ್ಷಿಪಣಿ ಪರೀಕ್ಷೆಗೆ ಸಂಬಂಧಿಸಿದ್ದು ಆಗಿರುವ ಸಾಧ್ಯತೆಯಿದೆ ಎಂದು ಭಾರತೀಯ ನೌಕಾಪಡೆಯ ಮೂಲಗಳು ತಿಳಿಸಿವೆ. ಬಾಬರ್ ಸಬ್‌ಮೆರೀನ್‌ನಿಂದ ಉಡಾಯಿಸುವ ಕ್ಷಿಪಣಿ. ಆದರೆ ವಿಡಿಯೋದಲ್ಲಿ ಸಮುದ್ರದಲ್ಲಿ ತೇಲುವ ಉಡ್ಡಯನಾ ಪರೀಕ್ಷೆ ವೇದಿಕೆಯಿಂದ ಈ ಕ್ಷಿಪಣಿಯನ್ನು ಉಡಾಯಿಸಲಾಗಿದೆ.
ಬಾಬರ್ ಕ್ಷಿಪಣಿಯ ಪರೀಕ್ಷಾ ಉಡ್ಡಯನ ಯಶಸ್ವಿಯಾಗಿದೆ ಎಂದು ಪಾಕಿಸ್ತಾನ ಸೋಮವಾರ ಪ್ರಕಟಿಸಿತ್ತು. ಈ ಕ್ಷಿಪಣಿಯ ವ್ಯಾಪ್ತಿ ಕನಿಷ್ಟ 450 ಕಿ.ಮೀ. ಆಗಿದೆ. ದೇಶಕ್ಕೆ ತ್ರಿವಳಿ ಪರಮಾಣು ಬಲ ಇದೀಗ ಸಾಧ್ಯವಾಗಿದೆ. ಈ ಹಿಂದೆ ನೆಲದಿಂದ ಉಡಾಯಿಸುವ ಪ್ರಕ್ಷೇಪಕ ಕ್ಷಿಪಣಿಯನ್ನು ಮತ್ತು ತನ್ನ ಫೈಟರ್ ಜೆಟ್‌ಗಳ ಮೂಲಕ ಅಣುಬಾಂಬು ದಾಳಿ ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸಲಾಗಿದೆ. ಇದೀಗ ಸಬ್‌ಮೆರೀನ್‌ನಿಂದ ಬಾಬರ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ ಎಂದು ಪಾಕ್ ಹೇಳಿಕೆ ನೀಡಿತ್ತು.
ಪಾಕಿಸ್ತಾನದ ಈ ಸಾಧನೆ ಈ ದೇಶದ ರಕ್ಷಣಾ ಸಾಮರ್ಥ್ಯದ ವರ್ಧನೆಯತ್ತ ಬಹುದೊಡ್ಡ ಹೆಜ್ಜೆ ಎಂದು ರಾಯ್‌ಟರ್ ಪತ್ರಿಕೆ ಕೂಡಾ ವರದಿ ಮಾಡಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ತಿಳಿಸಿದ್ದವು.







