ಟ್ರಂಪ್ ಜೊತೆಗೆ ‘ಹೆದರಿಕೆಯಿಲ್ಲದೆ’ ಸಂಧಾನ: ಮೆಕ್ಸಿಕೊ

ಮೆಕ್ಸಿಕೊ ಸಿಟಿ (ಮೆಕ್ಸಿಕೊ), ಜ. 10: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತದೊಂದಿಗೆ ತನ್ನ ದೇಶವು ‘ಯಾವುದೇ ಹೆದರಿಕೆಯಿಲ್ಲದೆ’ ವ್ಯವಹರಿಸುವುದು ಎಂದು ಮೆಕ್ಸಿಕೊದ ನೂತನ ವಿದೇಶ ಸಚಿವ ಲೂಯಿಸ್ ವಿಡಗರೆ ಸೋಮವಾರ ಹೇಳಿದ್ದಾರೆ.
ಟ್ರಂಪ್ ಜೊತೆಗೆ ರಚನಾತ್ಮಕ ಸಂಬಂಧವನ್ನು ಹೊಂದುವುದಕ್ಕಾಗಿ ಮಾಜಿ ಹಣಕಾಸು ಸಚಿವ ಲೂಯಿಸ್‌ರನ್ನು ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನ ಕಳೆದ ವಾರ ಸಂಪುಟಕ್ಕೆ ಮರುಸೇರ್ಪಡೆಗೊಳಿಸಿದ್ದರು. ಮೆಕ್ಸಿಕೊ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವ ಎಚ್ಚರಿಕೆಯನ್ನು ಟ್ರಂಪ್ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಅಮೆರಿಕದ ಚುನಾವಣೆಗಿಂತಲೂ ಮೊದಲು ಟ್ರಂಪ್ ಮೆಕ್ಸಿಕೊ ಸಿಟಿಯಲ್ಲಿ ಪೆನ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯು ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಭೇಟಿಯನ್ನು ಏರ್ಪಡಿಸಿದವರು ಲೂಯಿಸ್ ಎನ್ನುವುದು ಬಹಿರಂಗಗೊಂಡ ಬಳಿಕ, ಹಣಕಾಸು ಸಚಿವ ಹುದ್ದೆಗೆ ಅವರು ಸೆಪ್ಟಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.
‘‘ಆತ್ಮವಿಶ್ವಾಸದಿಂದ, ಯಾವುದೇ ಹೆದರಿಕೆಯಿಲ್ಲದೆ ಹಾಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅಮೆರಿಕಕ್ಕೆ ಮೆಕ್ಸಿಕೊ ಎಷ್ಟು ಮುಖ್ಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್‌ರೊಂದಿಗೆ ನಾವು ವ್ಯವಹರಿಸುತ್ತೇವೆ’’ ಎಂದು ಮೆಕ್ಸಿಕನ್ ರಾಯಭಾರಿಗಳ ಸಭೆಯಲ್ಲಿ ಲೂಯಿಸ್ ಹೇಳಿದರು.







