ಕಾಬೂಲ್: ಸಂಸತ್ ಸಮೀಪ ಅವಳಿ ಸ್ಫೋಟ; 21 ಸಾವು

ಕಾಬೂಲ್, ಜ. 10: ಕಾಬೂಲ್‌ನಲ್ಲಿರುವ ಅಫ್ಘಾನಿಸ್ತಾನದ ಸಂಸತ್ತಿನ ಸಮೀಪ ಮಂಗಳವಾರ ಅವಳಿ ಬಾಂಬ್‌ಗಳು ಸ್ಫೋಟಿಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಹಾಗೂ 45 ಮಂದಿ ಗಾಯಗೊಂಡಿದ್ದಾರೆ.
ಸಂಸತ್ ಆವರಣದಿಂದ ಉದ್ಯೋಗಿಗಳು ಕೆಲಸ ಮುಗಿಸಿ ಹೊರಹೋಗುತ್ತಿದ್ದ ಸಮಯದಲ್ಲಿ ಬಾಂಬ್‌ಗಳು ಸ್ಫೋಟಗೊಂಡಿವೆ.ದಾಳಿಯ ಹೊಣೆಯನ್ನು ತಾಲಿಬಾನ್ ತಕ್ಷಣವೇ ಹೊತ್ತುಕೊಂಡಿದೆ.
‘‘ಮೊದಲ ಸ್ಫೋಟ ಸಂಸತ್ತಿನ ಹೊರಗೆ ಸಂಭವಿಸಿತು. ಹಲವಾರು ಅಮಾಯಕ ನೌಕರರು ಹತರಾದರು ಹಾಗೂ ಗಾಯಗೊಂಡರು. ನಡೆದುಕೊಂಡು ಬಂದಿದ್ದ ಆತ್ಮಹತ್ಯಾ ಬಾಂಬರ್ ಓರ್ವ ಈ ದಾಳಿ ನಡೆಸಿದನು’’ ಎಂದು ಗಾಯಗೊಂಡ ಸಂಸತ್ ಭದ್ರತಾ ಸಿಬ್ಬಂದಿ ಎಎಫ್‌ಪಿಗೆ ಹೇಳಿದರು.
‘‘ಎರಡನೆಯದು ಕಾರ್ ಬಾಂಬ್ ಆಗಿತ್ತು. ಕಾರನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಲಾಗಿತ್ತು. ಅದು ಸ್ಫೋಟಗೊಂಡಾಗ ನಾನು ಹಿಂದೆ ಹಾರಿ ಬಿದ್ದೆ’’ ಎಂದರು.
ಕೆಲವು ಸಂಸದರ ಕಚೇರಿಯಿರುವ ಸಂಸತ್‌ನ ಭಾಗವೊಂದರ ಸಮೀಪ ಸ್ಫೋಟಗಳು ಸಂಭವಿಸಿವೆ.
ಅಫ್ಘಾನಿಸ್ತಾನದ ಪ್ರಧಾನ ಗುಪ್ತಚರ ಸಂಸ್ಥೆಯ ವಾಹನವೊಂದನ್ನು ಗುರಿಯಾಗಿಸಿ ಸ್ಫೋಟಗಳನ್ನು ನಡೆಸಲಾಗಿದೆ ಎಂದು ತಾಲಿಬಾನ್ ವಕ್ತಾರ ಝಬೀಯುಲ್ಲಾ ಮುಜಾಹೀದ್ ಹೇಳಿದನು.







