11ನೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಹಲವು ಸಮಸ್ಯೆಗಳ ಸುಳಿಯಲ್ಲಿ ಕನ್ನಡಿಗರುಸಮ್ಮೇಳನಾಧ್ಯಕ್ಷ

ಮಡಿಕೇರಿ, ಜ.10: ಯಾವುದೋ ಕಾಲದಲ್ಲಿ ಮಾಡಿಕೊಂಡ ಕಾವೇರಿ ಜಲ ಒಪ್ಪಂದದಿಂದ ಪ್ರತಿವರ್ಷ ಹಗೆಯ ಹೊಗೆಯ ಅವಾಂತರವಾಗಿ ಪರಿಹಾರ ಕಂಡಿಲ್ಲ. ಕನ್ನಡಮಯವಾಗಿರುವ ಕಾಸರಗೋಡು ಕರ್ನಾಟಕಕ್ಕೆ ಬರಲಿಲ್ಲ. ಮಡಕಶಿರ ಮೊದಲಾದ ಹಳ್ಳಿಗಳು ತಮಿಳುನಾಡಿಗೆ ಸೇರಿದವು. ನೀಟ್ ಪರೀಕ್ಷೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಕನ್ನಡದ ಮಾನ್ಯತೆ ಇಲ್ಲ. ಕನ್ನಡಿಗರಿಗೆ ಇಂತಹ ಹಲವು ಸಮಸ್ಯೆಗಳು ಕಾಡುತ್ತಿವೆ ಎಂದು ಸಮ್ಮೇಳನಾಧ್ಯಕ್ಷ ಎಸ್.ಸಿ. ರಾಜಶೇಖರ್ ಹೇಳಿದರು.
11ನೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಾನಸಿಕ, ದೈಹಿಕ ಸಮರ್ಥ ನಾಯಕರು ಕರ್ನಾಟಕಕ್ಕೆ ಬೇಕಾಗಿದ್ದಾರೆ. ಕೇಂದ್ರದ ನಾಯಕರ ಮಾತಿಗೆ ತಲೆ ತೂಗಿ ಬಂದರೆ ಸಾಲದು.ಅವರ ಮನ ಒಲಿಸಿ ಸಮಸ್ಯೆಗಳನ್ನು ಬಗೆಹರಿಸುವ ಚಾಕಚಕ್ಯತೆ ಎದೆಗಾರಿಕೆ ಕನ್ನಡಿಗ ರಾಜಕಾರಣಿಗಳಿಗೆ ಇರಬೇಕು ಎಂದರು.
ನಮ್ಮೂರೇ ಚಂದ, ನಮ್ಮವರೇ ಅಂದ, ಕನ್ನಡ ಭಾಷೆ ಕರ್ಣಾನಂದ, ಉನ್ನತ ಕೀರ್ತಿಗೆ ತವರೂರಾದ ಕನ್ನಡ ನಾಡಿನ ಇತಿಹಾಸ ಚಂದ ಎಂದು ನುಡಿದರು.
ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಂ.ಆರ್. ಸೀತಾರಾಂ, ಕೊಡಗಿನ ಗೌರಮ್ಮ ಸೇರಿದಂತೆ ಜಿಲ್ಲೆಯ ಹಲವು ಸಾಹಿತಿಗಳು ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಕಲೆ ಹೀಗೆ ನಾನಾ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದು ಕನ್ನಡ ಭಾಷಾ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇವರನ್ನು ಸ್ಮರಿಸುವಂತಾಗಬೇಕು ಎಂದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಕನ್ನಡ ಭಾಷೆಯ ಜೊತೆಗೆ ಬದುಕಿನ ಭಾಷೆಯನ್ನು ಕಲಿಸಬೇಕಿದೆ. ತಾಯಿ ಭಾಷೆ ಉಳಿದಾಗ ಇತರ ಭಾಷೆಗಳು ಸಹ ಉಳಿಯಲು ಸಾಧ್ಯ. ಆದ್ದರಿಂದ ನಾಡಿನ ಭಾಷೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಇತರ ಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸಬೇಕು ಎಂದು ಅವರು ಸಲಹೆ ಮಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಹಾಬಲೇಶ್ವರ ಭಟ್ ಮಾತನಾಡಿ, ರಾಜ್ಯದಲ್ಲಿ ಹಲವು ಅಕಾಡಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆಯೇ ಎಂಬುದನ್ನು ಚಿಂತನೆ ಮಾಡಬೇಕಿದೆ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಕುಶಾಲನಗರ ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ.ಎಂ.ಚರಣ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಪದ್ಮಿನಿ ಪೊನ್ನಪ್ಪ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್. ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾರತಿ ಮತ್ತು ತಂಡದವರು ನಾಡಗೀತೆ ಹಾಡಿದರು. ಆರ್.ರವಿ ಮತ್ತು ತಂಡದವರು ರೈತ ಗೀತೆ ಹಾಡಿದರು. ಕೆ.ಎಸ್.ರಮೇಶ್ ಸ್ವಾಗತಿಸಿದರು. ಹಂಡ್ರಂಗಿ ನಾಗರಾಜ್ ಮತ್ತು ಸ್ಮಿತಾ ಅಮೃತರಾಜ್ ನಿರೂಪಿಸಿದರು. ಅಶ್ವತ್ಥ್ ಕುಮಾರು ಮತ್ತು ಈಶ ನಿರ್ವಹಣೆ ಮಾಡಿದರು. ಕೆ.ಕೆ.ಸುನೀತಾ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಎಸ್.ಎ. ಮುರಳೀಧರ ವಂದಿಸಿದರು.
ಇಂದಿನ ಕಾರ್ಯಕ್ರಮ
ಜ.11ರಂದು ಬೆಳಗ್ಗೆ 10 ರಿಂದ 11:30 ರವರೆಗೆ ಮಕ್ಕಳ ಗೋಷ್ಠಿ, ಭಾಷೆ ಮತ್ತು ಬದುಕು, ಕನ್ನಡ ಗೀತಗಾಯನ, ಶೈಕ್ಷಣಿಕ ಗೋಷ್ಠಿ, ಕವಿಗೋಷ್ಠಿ, ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 5 ಗಂಟೆಗೆ ಸಾಧಕರಿಗೆ ಸನ್ಮಾನ, ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.







