ಜ.13ರಂದು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವ
ಕಲ್ಯಾಣಪುರ, ಜ.10: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಹಾಗೂ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜುಗಳ ಸುವರ್ಣ ಮಹೋತ್ಸವ ಸಮಾರಂಭ ಜ.13ರಂದು ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣಪುರ ಪರಿಸರದ ಬಡ, ಕೃಷಿಕ ಮಕ್ಕಳಿಗೆ ಕಾಲೇಜು ಶಿಕ್ಷಣ ನೀಡುವ ಮಹತ್ತರ ಧ್ಯೇಯದೊಂದಿಗೆ ವಂ.ಮೊನ್ಸಿಂಜೊರ್ ಡಿಸೋಜ ಅವರು ತಮ್ಮ 83ನೇ ಇಳಿವಯಸ್ಸಿನಲ್ಲಿ ಮಿಲಾಗ್ರಿಸ್ ಕಾಲೇಜನ್ನು 1967ರಲ್ಲಿ ಪ್ರಾರಂಭಿಸಿದ್ದು, ಖ್ಯಾತ ಇತಿಹಾಸ ಸಂಶೋಧಕ ಡಾ.ಪಾದೂರು ಗುರುರಾಜ ಭಟ್ಟರು ಮೊದಲ ಪ್ರಾಂಶುಪಾಲರಾಗಿ ಕಾಲೇಜನ್ನು ಮುನ್ನಡೆಸಿದ್ದರು ಎಂದವರು ವಿವರಿಸಿದರು.
ಆರಂಭದಲ್ಲಿ ಪ.ಪೂ.ವಿಭಾಗದಲ್ಲಿ ಕಲಾ ಮತ್ತು ವಾಣಿಜ್ಯ ಹಾಗೂ ಪದವಿ ವಿಭಾಗದಲ್ಲಿ ಬಿ.ಎ ಮತ್ತು ಬಿಕಾಂ ತರಗತಿಗಳಿದ್ದವು. 1981ರಲ್ಲಿ ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ವಿಜ್ಞಾನ ಹಾಗೂ ಬಿಎಸ್ಸಿ ಪದವಿಯನ್ನು ಪ್ರಾರಂಭಿಸಲಾಗಿತ್ತು. ಇದರೊಂದಿಗೆ ಈಗ ಬಿಬಿಎಂ, ಬಿಸಿಎ, ಎಂಎಸ್‌ಡಬ್ಲು ಮತ್ತು ಎಂ.ಕಾಂ. ಸ್ನಾತಕೋತ್ತರ ವಿಭಾಗಗಳಲ್ಲೂ ತೆರೆಯಲಾಗಿದೆ ಎಂದವರು ಹೇಳಿದರು.
ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಬಿ.ಎ., ರಸಾಯನ ಶಾಸ್ತ್ರ ಮತ್ತು ಗಣಿತಗಳಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಕ್ಕಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸಲು ನಿಧಿಯನ್ನು ಸಂಗ್ರಹಿಸಲಾಗುತ್ತಿದೆ. ಯುಜಿಸಿಯ ನೆರವಿನಿಂದ ಹೊರಾಂಗಣ ಹಾಗೂ ಒಳಾಂಗಣ ಸ್ಟೇಡಿಯಂನ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು, ಮರಳಿನ ಕೊರತೆಯಿಂದ ನಿಧಾನಗೊಂಡಿದೆ ಎಂದು ಡಾ.ಪಿಂಟೊ ತಿಳಿಸಿದರು.
ಮೊದಲು ಪದವಿ ತರಗತಿಗಳು ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ನಡೆದರೆ, 1967ರಲ್ಲಿ ಎರಡಂತಸ್ತಿನ ಕಾಲೇಜು ಕಟ್ಟಡ ನಿರ್ಮಿಸಲಾಯಿತು. ಯುಜಿಸಿ ಮತ್ತು ಸಾರ್ವಜನಿಕರ ನೆರವಿನಿಂದ ಪ್ರತ್ಯೇಕ ವಿಜ್ಞಾನ ವಿಭಾಗ, ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯ, ಆಟದ ಮೈದಾನ, ವಿದ್ಯಾರ್ಥಿನಿಯರ ವಸತಿಗೃಹ, ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದೆ.
231 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಈ ಸಂಸ್ಥೆಯಲ್ಲಿ ಈಗ ಒಟ್ಟು ಸುಮಾರು 1800ಕ್ಕೂ ಅಧಿಕ ವಿದ್ಯಾರ್ಥಿಗಳು, 95 ಶಿಕ್ಷಕರು ಹಾಗೂ 30 ಆಡಳಿತ ಸಿಬ್ಬಂದಿಗಳು ಇದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆಗಳೊಂದಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.
ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಜ.12ರಂದು ಬೆಳಗ್ಗೆ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಕೃತಜ್ಞತಾ ಬಲಿಪೂಜೆ ನೆರವೇರಿಸುವರು. ಜ.13ರಂದು ಬೆಳಗ್ಗೆ 9:30ಕ್ಕೆ ಬಿಷಪ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಕೋಟ್ಯಾನ್ ಪಾಲ್ಗೊಳ್ಳುವರು.
ಕಾಲೇಜು ಸ್ಥಾಪನೆಯಲ್ಲಿ ಸಹಕರಿಸಿದ ವಂ.ವಿಲಿಯಂ ಗೊನ್ಸಾಲ್ವಿಸ್ ಹಾಗೂ ಶಿರ್ತಾಡಿ ವಿಲಿಯಂ ಪಿಂಟೊ, ಕಾಲೇಜಿನ ಸಂಚಾಲಕರಾಗಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು, ನಿವೃತ್ತ ಪ್ರಾಂಶುಪಾಲರನ್ನು, ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಗುವುದು. ವಿಶಿಷ್ಟ ಸಾಧನೆ ಮಾಡಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸಹ ಗೌರವಿಸಲಾಗುವುದು.
ಅಲ್ಲದೇ ಚಿತ್ರಕಲಾವಿದ ಪೀಟರ್ ಎ.ಲೂವಿಸ್, ಸಾಹಿತಿ ಮತ್ತು ತುಳು ವಿದ್ವಾಂಸೆ ಎಂ.ಜಾನಕಿ ಬ್ರಹ್ಮಾವರ, ಅಂಚೆಚೀಟಿ ಸಂಗ್ರಾಹಕ ಡೇನಿಯಲ್ ಮೊಂತೇರೊ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಕಾಲೇಜು ವಿದ್ಯಾರ್ಥಿ ಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಸಂಚಾಲಕರಾದ ವಂ.ಸ್ಟಾನಿ ಬಿ.ಲೋಬೊ, ಕ್ಯಾಂಪಸ್ ನಿರ್ದೇಶಕರಾದ ವಂ.ಡಾ.ಪ್ರಕಾಶ್ ಅನಿಲ್ ಕ್ಯಾಸ್ತಾಲಿನೋ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಸವಿತಾ ಕೆ., ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಯರಾಮ ಶೆಟ್ಟಿಗಾರ್ ಉಪಸ್ಥಿತರಿದ್ದರು.







