ತರೀಕೆರೆ ಪುರಸಭೆ ಅಧ್ಯಕ್ಷೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ತರೀಕೆರೆ, ಜ.10: ತರೀಕೆರೆ ಪಟ್ಟಣಕ್ಕೆ ಭದ್ರಾ ನದಿಯಿಂದ ನೀರು ಸಂಗ್ರಹಿಸಿ ನಂತರ ಪಂಪ್ ಹೌಸ್ ಮುಖಾಂತರ ನೀರು ಹರಿಸುವ 7 ಲಕ್ಷ ರೂ. ವೆಚ್ಚದ ಫೀಡರ್ ಚಾನಲ್, ಮುಖ್ಯಮಂತ್ರಿ ವಿಶೇಷ ಅನುದಾನದಡಿ ಬಿಡುಗಡೆಯಾದ 20 ಲಕ್ಷ ರೂ.ಗಳ ಮಾನಸಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಪುರಸಭೆ ಅಧ್ಯಕ್ಷೆ ಪರ್ವೀನ್ ತಾಜ್ ಗಂಗಾಪೂಜಾ ನೆರವೇರಿಸಿ ಚಾಲನೆ ನೀಡಿದರು.
ನಂತರ ಅವರು ಮಾನಸಿ ಕೆರೆ ಪಂಪ್ ಹೌಸ್ ಬಳಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಬಹಳ ವರ್ಷಗಳಿಂದ ಮಾನಸಿಕೆರೆ ಹೂಳು ಎತ್ತಲಾಗಿಲ್ಲ. ಪಟ್ಟಣದಲ್ಲಿ ದಿನೇ ದಿನೇ ನೀರಿನ ಆವಶ್ಯಕತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿ ಕೆರೆ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಅದಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಧರ್ಮರಾಜ್, ವರ್ಮಾ ಪ್ರಕಾಶ್, ನಾಗರಾಜ್, ಉಪಾಧ್ಯಕ್ಷ ಅಶೋಕ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಪುರಸಭೆಯ ಸದಸ್ಯರು, ನಾಮಿನಿ ಸದಸ್ಯ ಗಂಗಾಧರ್, ಆದಿಲ್ ಪಾಷ ಉಪಸ್ಥಿತರಿದ್ದರು.





