ನಾಳೆ ಶಿವಮೊಗ್ಗ ಎಪಿಎಂಸಿ ಚುನಾವಣೆ
‘ಬರ’ದ ನಡುವೆಯೂ ಪ್ರಚಾರದ ಅಬ್ಬರ ಜೋರು!
ಬಿ. ರೇಣುಕೇಶ್
ಶಿವಮೊಗ್ಗ, ಜ.10: ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಜಿಲ್ಲೆಯಾದ್ಯಂತ ಭೀಕರ ಬರಗಾಲದ ಕರಿಛಾಯೆ ಆವರಿಸಿದೆ. ಹಲವು ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ತೀವ್ರ ಹಾಹಾಕಾರ ತಲೆದೋರಿದೆ. ಈಗಾಗಲೇ ರಾಜ್ಯ ಸರಕಾರ ಜಿಲ್ಲೆಯ ಆರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿದೆ.
ಬರಗಾಲ ಪೀಡಿತ ಗ್ರಾಮಗಳ ನಾಗರಿಕರಿಗೆ ನೆರವಾಗುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರ ನಡುವೆಯೇ ಜಿಲ್ಲೆಯ ಏಳು ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗಳಿಗೆ ಜ. 12ರಂದು ಮತದಾನ ನಡೆಯುತ್ತಿದ್ದು, ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಲಾರಂಭಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ತಲೆದೋರಿರುವ ‘ಬರ’ ಪರಿಸ್ಥಿತಿಯ ನಡುವೆಯೇ ಅಭ್ಯರ್ಥಿಗಳು ಅಬ್ಬರದ ಪ್ರಚಾರಕ್ಕಿಳಿದಿದ್ದು, ಮತದಾರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತದಾನಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿಯಿರುವುದರಿಂದ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಶಿವಮೊಗ್ಗ ತಾಲೂಕಿನ ನಗರ ವ್ಯಾಪ್ತಿಯ ಗ್ರಾಮಗಳಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ದೊಡ್ಡ ದೊಡ್ಡ ಫ್ಲೆಕ್ಸ್-ಬ್ಯಾನರ್‌ಗಳನ್ನು ನಗರದಂಚಿನ ಗ್ರಾಮಗಳಲ್ಲಿ ಹಾಕಿ, ಮತದಾರರ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ.
ಈ ಹಿಂದಿನ ವರ್ಷಗಳ ಎಪಿಎಂಸಿ ಚುನಾವಣೆಗೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷದ ಚುನಾವಣೆ ಸಾಕಷ್ಟು ಜಿದ್ದಾಜಿದ್ದಿನ ಅಖಾಡಕ್ಕೆ ಎಡೆ ಮಾಡಿಕೊಟ್ಟಿದೆ.
ಪಕ್ಷಗಳಿಗೂ ಪ್ರತಿಷ್ಠೆ: ಎಪಿಎಂಸಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯುವುದಿಲ್ಲ. ಆದರೆ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಇದರಿಂದ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಎಪಿಎಂಸಿಗಳ ಆಡಳಿತ ಚುಕ್ಕಾಣಿ ಹಿಡಿಯುವ ಕಸರತ್ತು ನಡೆಸುತ್ತಿವೆ.
ಇದಕ್ಕಾಗಿ ನಾನಾ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತಿವೆ. ಶಿವಮೊಗ್ಗ, ಸಾಗರ ಮತ್ತು ಶಿಕಾರಿಪುರದ ಎಪಿಎಂಸಿಗಳಿಗೆ ದಶಕದ ಬಳಿಕ ಚುನಾವಣೆ ನಡೆಯುತ್ತಿದೆ. ಉಳಿದಂತೆ ತೀರ್ಥಹಳ್ಳಿ, ಹೊಸನಗರ ಹಾಗೂ ಸೊರಬದಲ್ಲಿ ಮೊಟ್ಟಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.









