ಕನ್ನಡ ಜಾನಪದ ಪರಿಷತ್‌ನ ದ.ಕ ಜಿಲ್ಲಾ ಅಧ್ಯಕ್ಷರಾಗಿ ಡಾ.ಅನುರಾಧಾ ಕುರುಂಜಿ ಆಯ್ಕೆ

ಸುಳ್ಯ , ಜ.10 : ಕನ್ನಡ ಜಾನಪದ ಪರಿಷತ್‌ನ ದ.ಕ ಜಿಲ್ಲಾ ಅಧ್ಯಕ್ಷರಾಗಿ ನೆಹರೂ ಮೆಮೊರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯದಾದ್ಯಂತ ಕನ್ನಡ ಜಾನಪದ ಪರಿಷತ್ ಜಾನಪದ ಕಲೆಗಳ ಕ್ಷೇತ್ರ ಕಾರ್ಯ, ದಾಖಲೀಕರಣ, ತರಬೇತಿ, ಪ್ರಕಟಣೆಗಳು, ವಸ್ತು ಸಂಗ್ರಹ, ದ್ವನಿ ಮುದ್ರಣ, ಜಾನಪದ ಕಲಾವಿದರ ಮಾನ-ಸನ್ಮಾನ, ಪ್ರಶಸ್ತಿ ಪದಾನ ಮುಂತಾದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ. ಇದೀಗ ನಗರ ಕೇಂದ್ರಿತದಿಂದ ಜಾನಪದ ಚಟುವಟಿಕೆಗಳನ್ನು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಜಿಲ್ಲಾ ಸಮಿತಿಯನ್ನು ರಚಿಸಿದ್ದು, ತಾಲೂಕು ಗ್ರಾಮ ಮಟ್ಟದಲ್ಲೂ ಜಾನಪದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ಮುನ್ನಡೆಸುವ ಸಲುವಾಗಿ ಇವರನ್ನು ದ.ಕ.ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಈ ಮೊದಲು ಹಾವೇರಿಯ ಜಾನಪದ ವಿಶ್ವ ವಿದ್ಯಾಲಯದ ಗ್ರಾಮ ಚರಿತ್ರೆ ಕೋಶ ಯೋಜನೆಯ ಕ್ಷೇತ್ರ ತಜ್ಞೆಯಾಗಿ ದುಡಿದಿರುವುದಲ್ಲದೇ, ವಿದ್ಯಾರ್ಥಿಗಳಲ್ಲಿ ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧೆಡೆ ಜಾನಪದ ಚಟುವಟಿಕೆಗಳನ್ನು ಸಂಘಟಿಸಿರುವ ಹಾಗೂ ಕ್ಷೇತ್ರ ಕಾರ್ಯ ನಡೆಸಿರುವ ಇವರು ತಾಲೂಕು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಕನ್ನಡ ಜಾನಪದ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇವರು ಕುರುಂಜಿ ಪದ್ಮಯ್ಯ ಗೌಡ ಸೀತಮ್ಮ ದಂಪತಿಗಳ ಪುತ್ರಿ, ಚಂದ್ರಶೇಖರ ಬಿಳಿನೆಲೆಯವರ ಪತ್ನಿ.







