ಸೂಲಿಬೆಲೆ ಕಾರ್ಯಕ್ರಮದ 'ಗಲಾಟೆ' ಎಫೆಕ್ಟ್: ಆತ್ಮಹತ್ಯೆಗೆ ಶರಣಾದ ಎಬಿವಿಪಿ ಕಾರ್ಯಕರ್ತ
‘ನನ್ನ ಲೈಫ್ ಹಾಳಾಯಿತು’ ಎಂದು ಡೆತ್‌ನೋಟ್ ಬರೆದಿಟ್ಟಿದ್ದ ಪದವಿ ವಿದ್ಯಾರ್ಥಿ

ಚಿಕ್ಕಮಗಳೂರು, ಜ.11: ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮಕ್ಕೆ ಸಂಬಂಧಿಸಿ ಉಂಟಾಗಿದ್ದ ಗಲಾಟೆಯಿಂದ ಬೇಸತ್ತು ಎಬಿವಿಪಿ ಕಾರ್ಯಕರ್ತ, ಪದವಿ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶೃಂಗೇರಿಯಲ್ಲಿಂದು ನಡೆದಿದೆ.
ಇಲ್ಲಿನ ಜೆಸಿಬಿಎಂ ಕಾಲೇಜಿನ ಬಿಕಾಂ ವಿದ್ಯಾರ್ಥಿ ಅಭಿಷೇಕ್(21) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಹಿನ್ನೆಲೆ:
ಜ.7 ರಂದು ಕಾಲೇಜಿನಲ್ಲಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆಯವರನ್ನು ಆಹ್ವಾನಿಸಲಾಗಿತ್ತು. ಅವರು ಕಾರ್ಯಕ್ರುಕ್ಕೆ ಬರಬಾರದು. ಅವರು ಬಂದು ಭಾಷಣ ಮಾಡುವುದರಿಂದ ವಿದ್ಯಾರ್ಥಿಗಳ ಭಾವನೆಗಳು ಹಾಳಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಚಕ್ರವರ್ತಿ ಸೂಲಿಬೆಲೆ ಕಾಲೇಜು ಪ್ರವೇಶಿಸಬಾರದು ಎಂದು ಎನ್‌ಎಸ್‌ಯುಐ ಸಂಘಟನೆ ವಿದ್ಯಾರ್ಥಿಗಳು ಶೃಂಗೇರಿಯಲ್ಲಿ ಪತ್ರಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು.
ಇದೇ ವಿಚಾರಕ್ಕೆ ಕಾಲೇಜಿನಲ್ಲಿ ಎಬಿವಿಪಿ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹಿತ ತೀವ್ರ ತರಹದ ಗಲಾಟೆ ನಡೆಯಿತು. ಗಲಾಟೆ ಹಿನ್ನೆಲೆಯಲ್ಲಿ ಮೃತ ಅಭಿಷೇಕ್ ಸೇರಿದಂತೆ ನಾಲ್ವರ ವಿರುದ್ಧ ಶೃಂಗೇರಿ ದೂರು ದಾಖಲಾಗಿತ್ತು. ಅಭಿಷೇಕ್ ಎಬಿವಿಪಿ ಸೇರಿಕೊಂಡು ಗಲಾಟೆಯಲ್ಲಿ ಪಾಲ್ಗೊಂಡಿರುವ ವಿಷಯ ಮನೆ ಮಂದಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗುತ್ತಿದ್ದಂತೆ ತಂದೆ, ತಾಯಿ ಸಹಿತ ಪೋಷಕರು ಬೈಯ್ಯುವ ಭಯ ಆತನನ್ನು ಕಾಡಿರುವ ಶಂಕೆ ವ್ಯಕ್ತವಾಗಿದೆ.
ನಾನು ಯಾವುದೇ ಗಲಾಟೆ ಮಾಡಿಲ್ಲ. ನನ್ನ ಮೇಲೆ ಎಫ್‌ಐಆರ್ ಆಗಿದೆ. ಇನ್ಮುಂದೆ ನನಗೆ ಯಾವುದೇ ಸರ್ಕಾರಿ ಉದ್ಯೋಗ ಸಿಗೋದಿಲ್ಲ. ನಾನು ನಿಮ್ಮ ವ್ಯಾಲ್ಯೂವನ್ನು ಸಮಾಜದಲ್ಲಿ ಹಾಳು ಮಾಡಿದೆ. ಅಪ್ಪಅಮ್ಮ ನನ್ನನ್ನುಕ್ಷಮಿಸಿ ಅಂತಾ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಎಬಿವಿಪಿ ಕಾರ್ಯಕರ್ತರು ಹಾಗೂ ಕಾಲೇಜು ವಿದ್ಯಾರ್ಥಿಗಳು ಶೃಂಗೇರಿಯ ಜೆಸಿಬಿಎಂ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರ ನ್ಯಾಯ ಒದಗಿಸುವ ಭರವಸೆ ನೀಡಿದರು. ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಶೃಂಗೇರಿ ಶಾಸಕ ಜೀವರಾಜ್ ಅಭಿಷೇಕ್ ಮನೆಗೆ ಭೇಟಿ ನೀಡಿದ್ದಾರೆ.







