ಗಣತಂತ್ರ ಪರೇಡಿನಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಪ್ಯಾರಾಟ್ರೂಪರ್ಸ್ ಪ್ರದರ್ಶನಕ್ಕೆ ರಕ್ಷಣಾ ಸಚಿವಾಲಯ ನಕಾರ

ಹೊಸದಿಲ್ಲಿ, ಜ.11: ಈ ವರ್ಷದ ಗಣತಂತ್ರ ದಿನ ಪರೇಡ್ ಅಂಗವಾಗಿ ಸಂಯುಕ್ತ ಅರಬ್ ಸಂಸ್ಥಾನವು ತನ್ನ ಪ್ಯಾರಾ ಟ್ರೂಪರ್ಸ್ ತಂಡವೊಂದನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದ್ದರೆ, ರಕ್ಷಣಾ ಸಚಿವಾಲಯವು ಸುರಕ್ಷಾ ಕಾರಣಗಳನ್ನು ನೀಡಿ ಅದಕ್ಕೆ ಅನುಮತಿ ನಿರಾಕರಿಸಿದೆಯೆಂದು ತಿಳಿದು ಬಂದಿದೆ. ಮೇಲಾಗಿ ಪ್ರತಿಕೂಲ ಹವಾಮಾನವೂ ಪ್ಯಾರಾಟ್ರೂಪರ್ಸ್ ಪ್ರದರ್ಶನಕ್ಕೆ ಅಡ್ಡಿಯಾಗಬಹುದೆಂಬ ಸಬೂಬು ನೀಡಲಾಗಿದೆ.
ಈ ವರ್ಷದ ಗಣತಂತ್ರ ದಿವಸ ಸಮಾರಂಭಕ್ಕೆ ಅಬುಧಾಬಿಯ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅವರು ತಮ್ಮ ದೇಶದ ರಕ್ಷಣಾ ಪಡೆಗಳ ಸುಪ್ರೀಂ ಕಮಾಂಡರ್ ಕೂಡ ಆಗಿದ್ದಾರೆ. ಮೂಲಗಳ ಪ್ರಕಾರ ರಾಜಪಥ್ ನಲ್ಲಿ ಸ್ಕೈ ಡೈವ್ ಮಾಡುವ ಯೊಜನೆಯನ್ನು ಕೈಬಿಟ್ಟ ನಂತರ ಭಾರತವು ಸಂಯುಕ್ತ ಅರಬ್ ಸಂಸ್ಥಾನಕ್ಕೆ ತನ್ನ ಮಾರ್ಚಿಂಗ್ ತಂಡ ಹಾಗೂ ಮಿಲಿಟರಿ ಬ್ಯಾಂಡ್ ಕಳುಹಿಸುವಂತೆ ಕೋರಿದೆ. ಈ ಆಹ್ವಾನವನ್ನು ಸಂಯುಕ್ತ ಅರಬ್ ಸಂಸ್ಥಾನ ಒಪ್ಪಿಕೊಂಡಿದ್ದೇ ಆದಲ್ಲಿ ಗಣತಂತ್ರ ಪರೇಡಿನಲ್ಲಿ ವಿದೇಶಿ ಮಿಲಿಟರಿ ತಂಡವೊಂದು ಭಾಗವಹಿಸುವ ಅವಕಾಶವನ್ನು ಎರಡನೆ ಬಾರಿ ನೀಡಿದಂತಾಗುವುದು. ಕಳೆದ ವರ್ಷದ ಸಮಾರಂಭದಲ್ಲಿ ಫ್ರಾನ್ಸ್ ದೇಶದ ಮಿಲಿಟರಿ ತಂಡವೊಂದು ಪರೇಡಿನಲ್ಲಿ ಭಾಗವಹಿಸಿತ್ತು,
ಆದರೆ ಸಮಾರಂಭದಲ್ಲಿ ಪ್ರಧಾನಿ, ರಾಷ್ಟ್ರಪತಿ ಸಹಿತ ಗಣ್ಯಾತಿಗಣ್ಯರು ಭಾಗವಹಿಸುವುದರಿಂದ ಪ್ಯಾರಾಟ್ರೂಪರ್ಸ್ ಪ್ರದರ್ಶನಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಮೇಲಾಗಿ ಇಲ್ಲಿಯ ತನಕ ಗಣತಂತ್ರ ದಿನ ಪರೇಡಿನಲ್ಲಿ ಭಾರತೀಯ ತಂಡವೇ ಪ್ಯಾರಾಟ್ರೂಪರ್ಸ್ ಪ್ರದರ್ಶನ ನೀಡಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ.





