ಕಾಂಗ್ರೆಸ್ ಬಂದ್ರೆ ಅಚ್ಚೇ ದಿನ್ : ರಾಹುಲ್

ಹೊಸದಿಲ್ಲಿ, ಜ.11: ಕೇಂದ್ರದಲ್ಲಿ 2019ರಲ್ಲಿ ಕಾಂಗ್ರೆಸ್ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ಆಗ ಮಾತ್ರ ದೇಶದಲ್ಲಿ ಜನಸಾಮಾನ್ಯರಿಗೆ ಅಚ್ಚೇ ದಿನ್ ಕಾಣಲು ಸಾಧ್ಯ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ವೇವಿದೇಶ ಪ್ರವಾಸ ಮುಗಿಸಿ ಆಗಮಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ’ಜನ್ ವೇದನಾ’ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನೋಟ್ ಬ್ಯಾನ್ ಅಪರಿಪಕ್ವ ನಿರ್ಧಾರವಾಗಿದೆ.ಐನೂರು ಹಾಗೂ ಸಾವಿರ ರೂ. ನೋಟ್ ಬ್ಯಾನ್ ಮಾಡಿ ಪ್ರತಿಯೊಂದು ಸಂಸ್ಥೆಗಳನ್ನು ದುರ್ಬಲಗೊಳಿಸಿರುವ ಪ್ರಧಾನಿ ಮೋದಿ ದೇಶದ ಬೆನ್ನಲುಬನ್ನು ಮುರಿದಿದ್ದಾರೆ ಎಂದು ಆರೋಪಿಸಿದರು.
ಸರಕಾರಿ ಕಾರ್ಯಕ್ರಮಗಳು ಪ್ರಧಾನಿ ಮೋದಿ ಮಾಡುವ ಯೋಗಾಸನದಂತಾಗಿದೆ. ಪ್ರಧಾನಿ ಮೋದಿ ಯೋಗವನ್ನು ಮಾಡುತ್ತಾರೆ. ಆದರೆ ಅವರು ಪದ್ಮಾಸನ ಮಾಡುವುದಿಲ್ಲ. ನಾನು ಈ ವಿಚಾರವನ್ನು ಗಮನಿಸಿದ್ದೇನೆ ಎಂದು ಹೇಳಿದರು.
ನಾವು ಸಂಘ ಸಂಸ್ಥೆ, ಮಾಧ್ಯಮಗಳನ್ನು , ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತದೆ. ಆದರೆ ಮೋದಿ ಯಾರಿಗೂ ಗೌರವ ನೀಡುವುದಿಲ್ಲ. ನೋಟ್ ಬ್ಯಾನ್ ಮಾಡುವ ವಿಚಾರವನ್ನು ಯಾರಿಗೂ ತಿಳಿಸಲಿಲ್ಲ. ಯಾರಲ್ಲೂ ಕೇಳಲಿಲ್ಲ ಎಂದು ಹೇಳಿದ ರಾಹುಲ್ "ಮೋದಿ ಮತ್ತು ಭಾಗವತ್ ಸರಕಾರವನ್ನು ನಡೆಸುತ್ತಿದ್ದಾರೆಂದು ಅಭಿಪ್ರಾಯಪಟ್ಟರು.







