ವರ್ವಾಡಿ ಪ್ರವೀಣ್ ಕೊಲೆ: ಮತ್ತಿಬ್ಬರು ಆರೋಪಿಗಳ ಸೆರೆ
ಬೆಳಗಾವಿ ಜೈಲಿನಲ್ಲಿ ಹತ್ಯೆಗೆ ಸಂಚು: ಎಸ್ಪಿ ಬಾಲಕೃಷ್ಣ

ಉಡುಪಿ, ಜ.11: ಹಿರಿಯಡ್ಕ ಕೋಟ್ನಕಟ್ಟೆ ಎಂಬಲ್ಲಿ ಡಿ.19ರಂದು ನಡೆದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಈ ಕೊಲೆಯ ಸಂಚು ರೂಪಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷಾ ಬಂಧಿ ಖೈದಿಯಾಗಿರುವ ಸಂತೋಷ್ ಪೂಜಾರಿ ಯಾನೆ ಸಂತು(39) ಹಾಗೂ ಉಡುಪಿ ಸಂತೆಕಟ್ಟೆಯ ಸುಜೀತ್ ಪಿಂಟೋ(33) ಬಂಧಿತ ಆರೋಪಿಗಳು. ಹಿರಿಯಡ್ಕದ ಸಂತೋಷ್ ರಾಮ್ ಯಾನೆ ಪುತ್ತಿಗೆ ಸಂತು(33), ಹಿರಿಯಡ್ಕ ಓಂತಿಬೆಟ್ಟುವಿನ ಸಂತೋಷ್ ಮಡಿವಾಳ ಯಾನೆ ಮಾಂಬೆಟ್ಟು ಸಂತು(33), ಫಲಿಮಾರಿನ ಲತೇಶ ಪೂಜಾರಿ(31) ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ.
ಈ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂತೋಷ್ ಪೂಜಾರಿಯನ್ನು ಕೊಲೆ ಮಾಡುವ ಬಗ್ಗೆ ಪ್ರವೀಣ್ ಕುಲಾಲ್ ಶಿವಮೊಗ್ಗ ನ್ಯಾಯಾಲಯದಲ್ಲಿ ಸಂಚು ರೂಪಿಸಿದ್ದನು. ಈ ವಿಚಾರ ಮಾಂಬೆಟ್ಟು ಸಂತು ಮೂಲಕ ಬೆಳಗಾಂ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ಸಂತೋಷ್ ಪೂಜಾರಿಗೆ ತಿಳಿಯಿತು.
ಇದೇ ವಿಚಾರವಾಗಿ ಡಿ.14ರಂದು ಪುತ್ತಿಗೆ ಸಂತು, ಮಾಂಬೆಟ್ಟು ಸಂತು, ಲತೇಶ್ ಪೂಜಾರಿ ಜೈಲಿನಲ್ಲಿ ಸಂತೋಷ್ ಪೂಜಾರಿಯನ್ನು ಭೇಟಿ ಮಾಡಿ ಪ್ರವೀಣ್ ಕುಲಾಲ್‌ನನ್ನು ಕೊಲೆ ಮಾಡುವ ಬಗ್ಗೆ ನಿರ್ಧರಿಸಿದ್ದರು. ಇದಕ್ಕಾಗಿ ಸುಜೀತ್ ಪಿಂಟೋ, ಮಾಂಬೆಟ್ಟು ಸಂತುಗೆ 1,50,000ರೂ. ಹಣವನ್ನು ನೀಡಿದ್ದನು. ಅದರಂತೆ ಡಿ.19ರಂದು ವರ್ವಾಡಿ ಪ್ರವೀಣ್ ಕುಲಾಲನನ್ನು ಮಾಂಬೆಟ್ಟು ಸಂತು ಮೂಲಕ ಹಿರಿಯಡ್ಕದ ಕೋಟ್ನಕಟ್ಟೆ ದಿಯಾ ಬಾರ್‌ಗೆ ಕರೆಸಿದ್ದು, ಅಲ್ಲಿ ಕ್ಯಾಬಿನ್ನಲ್ಲಿ ಇರುವಾಗ ಮಾಂಬೆಟ್ಟು ಸಂತು, ಪುತ್ತಿಗೆ ಸಂತುಗೆ ಮೊಬೈಲ್ ಸಂದೇಶ ಕಳುಹಿಸಿ ಪ್ರವೀಣ್ ಬಾರ್‌ನಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದನು.
ಅದರಂತೆ ಪುತ್ತಿಗೆ ಸಂತು ಮತ್ತು ಲತೇಶ್ ಪೂಜಾರಿ ತಲವಾರು ಹಿಡಿದು ಕೊಂಡು ಕ್ಯಾಬಿನ್ ಒಳಗೆ ನುಗ್ಗಿ ಪ್ರವೀಣ್ ಕುಲಾಲ್‌ಗೆ ತಲವಾರಿನಿಂದ ಹಲ್ಲೆ ನಡೆಸಿದ್ದು ಇದರಿಂದ ತಪ್ಪಿಸಿಕೊಂಡು ಬಾರ್‌ನಿಂದ ಹೊರಗಡೆ ಓಡಿ ಬಂದ ಪ್ರವೀಣ್ ಕುಲಾಲ್‌ನನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ತಲವಾರು, ಕತ್ತಿ, ಬೈಕ್, ರಿಟ್ಝ್ ಕಾರು, 1,26,000ರೂ. ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಈ ಕೊಲೆ ಪ್ರಕರಣವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಮಾರ್ಗದರ್ಶನದಂತೆ ಡಿವೈಎಸ್ಪಿ ಕುಮಾರಸ್ವಾಮಿ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ ಕೆ., ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಹಿರಿಯಡ್ಕ ಠಾಣಾಧಿಕಾರಿ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿಯವರ ತಂಡ ಭೇದಿಸಿದೆ.
ಈ ತಂಡಕ್ಕೆ ಮಂಗಳೂರು ಐಜಿಪಿ ಬಹುಮಾನವನ್ನು ಘೋಷಿಸಿದ್ದಾರೆ.







