ಅಂಬ್ಲಮೊಗರು ಗ್ರಾಮಕ್ಕೆ ‘ನರ್ಮ್’ ಬಸ್ ಭಾಗ್ಯ ಕಲ್ಪಿಸಲು ಮನವಿ
ಮಂಗಳೂರು, ಜ.11: ಗ್ರಾಮೀಣ ಪ್ರದೇಶವಾದ ಅಂಬ್ಲಮೊಗರು ಗ್ರಾಮಕ್ಕೆ ‘ನರ್ಮ್’ ಬಸ್ ಭಾಗ್ಯ ಕಲ್ಪಿಸುವಂತೆ ಕಳೆದೊಂದು ವರ್ಷದಿಂದ ಸ್ಥಳೀಯ ಡಿವೈಎಫ್‌ಐ ನಾಯಕ ಇಬ್ರಾಹೀಂ ಮದಕ ಜಿಲ್ಲಾಧಿಕಾರಿ, ಆರ್‌ಟಿಒ, ಸ್ಥಳೀಯ ಶಾಸಕರು ಹೀಗೆ ಮೇಲಿಂದ ಮೇಲೆ ಎಲ್ಲರಿಗೂ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ನರ್ಮ್ ಬಸ್ ಭಾಗ್ಯ ಮಾತ್ರ ಇನ್ನೂ ಮರೀಚಿಕೆಯಾಗಿದೆ.
ಗ್ರಾಮದ ನೂರಾರು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೂಕ್ತ ಬಸ್ ಸೌಕರ್ಯವಿಲ್ಲದೆ ಪರದಾಡುವುದನ್ನು ಕಂಡ ಇಬ್ರಾಹೀಂ ಮದಕ ಹತ್ತಾರು ವರ್ಷದ ಹಿಂದೆಯೇ ಸರಕಾರಿ ಬಸ್ ಓಡಿಸಲು ಹೋರಾಟ ಆರಂಭಿಸಿದ್ದರು. ಗ್ರಾಮಸಭೆ, ಆರ್‌ಟಿಒ ಸಭೆಗಳಲ್ಲೂ ಈ ಬೇಡಿಕೆಯನ್ನು ಸಲ್ಲಿಸಿದ್ದರು. ನರ್ಮ್ ಬಸ್ ಪ್ರಸ್ತಾಪ ಬಂದ ತಕ್ಷಣ ಅಂಬ್ಲಮೊಗರಿಗೂ ಬಸ್ ಓಡಿಸಲು ಆಗ್ರಹಿಸಿದರು.
ಸ್ಟೇಟ್‌ಬ್ಯಾಂಕ್‌ನಿಂದ ತೊಕ್ಕೊಟ್ಟು, ಕುತ್ತಾರ್, ಅಂಬ್ಲಮೊಗರು, ಮದಕ, ಎಲಿಯಾರ್‌ಪದವು, ದೆಬ್ಬೇಲಿ, ಪಾವೂರು ಕಡವಿನ ಬಳಿಯ ನಿಸಾರ್ ಶಿಕ್ಷಣ ಸಂಸ್ಥೆ, ಹರೇಕಳ ರಾಮಕೃಷ್ಣ ಪ್ರೌಢಶಾಲೆ ಮಾರ್ಗ, ನ್ಯೂಪಡ್ಪು, ಗ್ರಾಮಚಾವಡಿ, ಪಾಣೇಲ, ಮುಡಿಪುವಿಗೆ ಮತ್ತು ಸ್ಟೇಟ್‌ಬ್ಯಾಂಕ್‌ನಿಂದ ಎಲಿಯಾರ್ ಪದವು, ನ್ಯೂಪಡ್ಪು, ಗ್ರಾಮಚಾವಡಿ, ಇನೋಳಿಗೆ ಹಾಗು ಸ್ಟೇಟ್‌ಬ್ಯಾಂಕ್‌ನಿಂದ ಎಲಿಯಾರ್ ಪದವು, ನ್ಯೂಪಡ್ಪು, ಗ್ರಾಮಚಾವಡಿ, ಪಾಣೇಲ, ಸಜಿಪ, ಮುಡಿಪುವಿಗೆ ನರ್ಮ್ ಬಸ್ ಓಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಇಬ್ರಾಹೀಂ ಮದಕ ಉಲ್ಲೇಖಿಸಿದ್ದಾರೆ.
ಈಗಾಗಲೆ ಮಂಜೂರಾದ 35 ನರ್ಮ್ ಬಸ್‌ಗಳ ಪೈಕಿ 18 ವಿವಿಧ ರೂಟ್‌ಗಳಲ್ಲಿ ಓಡಾಡುತ್ತಿವೆ. ಇನ್ನು17 ಬಸ್‌ಗಳು ಓಡಾಡಲು ಬಾಕಿ ಇದೆ. ಈ ಮೂರು ರೂಟ್‌ಗಳಲ್ಲಿ ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಇಬ್ರಾಹೀಂ ಮದಕ ಒತ್ತಾಯಿಸಿದ್ದಾರೆ.







