‘ಕಾರ್ಮಿಕರ ಭವಿಷ್ಯ ನಿಧಿಗೆ ಪಾವತಿಯಾಗದಿದ್ದರೆ ಸಂಸ್ಥೆಗಳೇ ಹೊಣೆ’
.jpg)
ಮಂಗಳೂರು, ಜ. 11: ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಭವಿಷ್ಯ ನಿಧಿ ನಿಯಮಿತವಾಗಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಭವಿಷ್ಯನಿಧಿ ಪಾವತಿಯಾಗದಿದ್ದರೆ ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳೇ ಹೊಣೆಯಾಗುತ್ತವೆ ಎಂದು ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಜ್ಯೂಲಿಯನ್ ತೋಬಿಯಸ್ ಎಚ್ಚರಿಕೆ ನೀಡಿದ್ದಾರೆ.
ಅವರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಂಗಳೂರು ವತಿಯಿಂದ ಬುಧವಾರ ಪ್ರಧಾನ ಮಂತ್ರಿಗಳ ರೋಜ್‌ಗಾರ್ ಪ್ರೋತ್ಸಾಹನ್ ಯೋಜನೆ, ಇಪಿಎಲ್ ಇ ನೂತನ ಅಭಿವೃದ್ಧಿ ಹಾಗೂ ನೋಂದಣಿ ಅಭಿಯಾನ-2017’ ಕುರಿತು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಕಂಪೆನಿಗಳು, ಸಂಸ್ಥೆಗಳು ತಮ್ಮಲ್ಲಿ ದುಡಿಯುವ ಕಾರ್ಮಿಕರನ್ನು ನೋಂದಣಿ ಮಾಡಬೇಕು. ಅವರ ಭವಿಷ್ಯನಿಧಿಯನ್ನು ಸಕಾಲದಲ್ಲಿ ಪಾವತಿಸುವುದು ಮಾತ್ರವಲ್ಲದೆ, ಈ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ. ಈ ಬಗ್ಗೆ ಅವಗಣನೆ ಕಂಡುಬಂದರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ-11 ಕೆ. ಪ್ರಶಾಂತ್ ಮಾತನಾಡಿ, ಕಾರ್ಮಿಕರು ಭವಿಷ್ಯ ನಿಧಿಯ ಎಲ್ಲಾ ಸವಲತ್ತುಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ನೋಂದಣಿಗೆ ಜ.1ರಿಂದ ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾಲದ ಮೂಲಕ ಪಿಎಲ್ ವಿಲೇವಾರಿ ನಡೆಯಲಿದ್ದು, ಈ ಬಗ್ಗೆ ಅಂತಿಮ ಹಂತದಲ್ಲಿದೆ ಎಂದರು.
ಮಂಗಳೂರಿನ ಸಹಾಯಕ ಭವಿಷ್ಯ ನಿಧಿ ಆಯುಕ್ತ ಎಂ. ರವಿ, ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ದಾನ, ಉಪಾಧ್ಯಕ್ಷ ವತಿಕಾ ಪೈ, ಗೌರವ ಕಾರ್ಯದರ್ಶಿಗಳಾದ ಪಿ.ಬಿ. ಅಬ್ದುಲ್ ಹಮೀದ್, ಪ್ರವೀಣ್ ಕುಮಾರ್ ಕಲ್ಬಾವಿ, ಗೌರವ ಕೋಶಾಧಿಕಾರಿ ಎಂ. ಗಣೇಶ್ ಭಟ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







