ರಾಷ್ಟ್ರಮಟ್ಟದ ಬಾಲಕಿಯರ ವಾಲಿಬಾಲ್ : ಕೇರಳ, ಉತ್ತರಪ್ರದೇಶ ಸೆಮಿಫೈನಲ್ ಗೆ
ಬೆಳ್ತಂಗಡಿ, ಜ.11 : ಉಜಿರೆಯ ರತ್ವವರ್ಮಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕೇರಳ ಹಾಗೂ ಉತ್ತರಪ್ರದೇಶ ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳ ತಂಡ ನೇರ ಸೆಟ್‌ಗಳಲ್ಲಿ ( 25-22,25-12,26-24) ಅಂಕಗಳೊಂದಿಗೆ ರಾಜಾಸ್ತಾನ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ತೇರ್ಗಡೆಯಾಯಿತು.ಪಂದ್ಯಾಟದಲ್ಲಿ ಅತ್ಯಂತ ಪ್ರಭಾವಿ ಪ್ರದರ್ಶನ ನೀಡುತ್ತಿರುವ ಕೇರಳ ತಂಡಕ್ಕೆ ರಾಜಾಸ್ತಾನ ತಂಡ ಯಾವ ಹಂತದಲ್ಲಿಯೂ ಪ್ರತಿರೋಧ ವ್ಯಕ್ತವಾಗಲಿಲ್ಲ . ಮೂರನೇ ಸೆಟ್‌ನಲ್ಲಿ ಒಂದು ಹಂತದಲ್ಲಿ ರಾಜಾಸ್ತಾನ ತಂಡ ಮುನ್ನಡೆಯನ್ನು ಪಡೆದರೂ ಅಂತಿಮವಾಗಿ ಕೇರಳ ಗೆಲುವನ್ನು ತನ್ನದಾಗಿಸಿಕೊಂಡಿತು.
ತಮಿಳುನಾಡನ್ನು ಉತ್ತರಪ್ರದೇಶ ರೋಚಕ ಹಣಾಹಣಿ
ಕುತೂಹಲ ಕೆರಳಿಸಿದ ಎರಡನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ವಿಜೇತ ತಂಡ ತಮಿಳುನಾಡನ್ನು ಉತ್ತರಪ್ರದೇಶ ತಂಡ ಅತ್ಯಂತ ರೋಚಕ ಹಣಾಹಣಿಯಲ್ಲಿ ಮಣಿಸಿ ಸೆಮಿಫೈನಲ್ ಹಂತಕ್ಕೇರಿದೆ. ಮೊದಲ ಎರಡು ಸೆಟ್‌ಗಳನ್ನು (25-18,25-14) ಅಂಕಗಳಲ್ಲಿ ಅತ್ಯಂತ ಸುಲಭವಾಗಿಯೇ ಗೆದ್ದುಕೊಂಡು ಮೂರನೇ ಸೆಟ್‌ನಲ್ಲಿಯೂ ಆರಂಭಿಕ ಮುನ್ನಡೆಯನ್ನು ತಮಿಳುನಾಡು ಪಡೆದುಕೊಂಡಿತ್ತು . ಏಕಪಕ್ಷೀಯವಾಗಿ ಪಂದ್ಯಾಟ ಮುಗಿಯಲಿದೆ ಎಂಬ ಹಂತದಲ್ಲಿ ಎಚ್ಚೆತ್ತುಕೊಂಡ ಉತ್ತರಪ್ರದೇಶ ತಂಡ ಮೂರನೇ ಸೆಟ್ ಅನ್ನು ( 25-21) ಅಂಕಗಳೊಂದಿಗೆ ತಮ್ಮದಾಗಿಸಕೊಂಡರು. ಅಲ್ಲಿಂದ ಮುಂದೆ ಉತ್ತರಪ್ರದೇಶ ತಂಡ ಉತ್ತಮ ಪ್ರದರ್ಶನವನ್ನು ಮುಂದುವರಿಸಿ ನಾಲ್ಕನೆ ಸೆಟ್‌ನು(25-20, ಹಾಗೂ ಐದನೆಯ ಸೆಟ್ ನ್ನು (15-11) ರಲ್ಲಿ ಗೆದ್ದು ಪಂದ್ಯಾಟದಲ್ಲಿ ಗೆಲುವನ್ನು ತನ್ನದಾಗಿಸಿಕೊಂಡರು.
ಗುರುವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಕೇರಳ ತಂಡ ಉತ್ತರಪ್ರದೇಶ ತಂಡವನ್ನು ಎದುರಿಸಲಿದೆ.







