ವಿಶ್ವದ ತೂಕದ ಮಹಿಳೆಯ ಶಸ್ತ್ರಚಿಕಿತ್ಸೆಗೆ ಹೊಸ ಆಸ್ಪತ್ರೆಯ ನಿರ್ಮಾಣ!

ಮುಂಬೈ, ಜ.12: ವಿಶ್ವದ ಅತ್ಯಂತ ತೂಕದ ಮಹಿಳೆ ಈಜಿಪ್ಟ್‌ನ ಇಮಾನ್ ಅಹ್ಮದ್(500 ಕೆಜಿ ತೂಕ) ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಾಗಿ ಮಹಾನಗರದ ಚರ್ನಿರೋಡ್‌ನಲ್ಲಿರುವ ಸೈಫೀ ಆಸ್ಪತ್ರೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರತ್ಯೇಕವಾಗಿ 2 ಕೋಟಿ ರೂ. ವೆಚ್ಚದಲ್ಲಿ ಹೊಸ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ.
3000 ಚದರ ಅಡಿ ವಿಸ್ತೀರ್ಣದ ಆಸ್ಪತ್ರೆಯಲ್ಲಿ ಆಪರೇಶನ್ ಥಿಯೇಟರ್, ತುರ್ತು ನಿಗಾ ಘಟಕ(ಐಸಿಯು), ಡಾಕ್ಟರ್‌ಗಳ ಕೊಠಡಿ, ಅಟೆಂಡೆಂಟ್ಸ್ ರೂಮ್, ಎರಡು ಬೆಡ್‌ರೂಮ್ ಹಾಗೂ ವೀಡಿಯೊ ಕಾನ್ಪರೆನ್ಸ್ ರೂಮ್‌ಗಳಿರುತ್ತವೆ. ಆಸ್ಪತ್ರೆಯ ಮುಖ್ಯ ವಿಂಗ್‌ನ ಹಿಂಭಾಗದ ತಳಮಹಡಿಯಲ್ಲಿ ಹೊಸಕಟ್ಟಡವನ್ನು ನಿರ್ಮಿಸಲಾಗುತ್ತಿದೆ.
ಸೈಫೀ ಆಸ್ಪತ್ರೆಯು ಹೊಸ ಕಟ್ಟಡದ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಇದನ್ನು ‘ಒಂದು ಹಾಸಿಗೆಯ ಆಸ್ಪತ್ರೆ’ಯೆಂದು ಕರೆಯಲಾಗುತ್ತಿದೆ. ಇಮಾನ್ ಅಹ್ಮದ್‌ರ ತೂಕ ಹಾಗೂ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಅಗಲದ ಬಾಗಿಲುಗಳನ್ನು ಅಳವಡಿಸಲಾಗಿದೆ.
36ರ ಹರೆಯದ ಇಮಾನ್ ಕಳೆದ 25 ವರ್ಷಗಳಿಂದ ಹಾಸಿಗೆಯಲ್ಲೇ ಮಲಗಿಕೊಂಡಿದ್ದು, ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ. ಡಯಾಬಿಟಿಸ್, ಅಸ್ತಮಾ, ಅಧಿಕ ರಕ್ತದೊತ್ತಡ, ಖಿನ್ನತೆ ಸಹಿತ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಸೈಫೀ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಮುಫಾಝಲ್ ಲಕ್ಡಾವಾಲಾ ಅವರು ಇಮಾನ್ ಅಹ್ಮದ್‌ರ ಶಸ್ತ್ರಚಿಕಿತ್ಸೆಗೆ ಸಹಾಯ ಧನ ಸಂಗ್ರಹಕ್ಕಾಗಿ ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ. ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಡಾ. ಲಕ್ಡಾವಾಲಾರ ಟ್ವೀಟ್‌ಗೆ ಪ್ರಕ್ರಿಯಿಸಿದ್ದು, ಇಮಾನ್ ಅಹ್ಮದ್‌ರನ್ನು ಭಾರತಕ್ಕೆ ಕರೆ ತರಲು ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇಮಾನ್ ಅಹ್ಮದ್‌ರನ್ನು ಮುಂಬೈಗೆ ಯಾವಾಗ ಕರೆತರಲಾಗುತ್ತದೆಂದು ಬಹಿರಂಗಪಡಿಸಲು ನಿರಾಕರಿಸಿದ ಡಾ. ಲಕ್ಡಾವಾಲಾ, ಸರ್ಜರಿಗಾಗಿ ಪೂರ್ವತಯಾರಿ ನಡೆಸಲಾಗುತ್ತಿದೆ. ಸರ್ಜರಿಯನ್ನು ಉಚಿತವಾಗಿ ನೆರವೇರಿಸಲಾಗುತ್ತದೆ. ಇಮಾನ್ ಕುಟುಂಬಸ್ಥರು ಶಸ್ತ್ರಚಿಕಿತ್ಸೆಯ ಬಳಿಕ ಯಾವುದೇ ಖರ್ಚು-ವೆಚ್ಚವನ್ನು ಭರಿಸುವ ಅಗತ್ಯವಿಲ್ಲ. ಇಮಾನ್ ಕನಿಷ್ಠ ಆರು ತಿಂಗಳ ಕಾಲ ನಮ್ಮ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಎಸ್‌ಬಿ ಕನ್‌ಸ್ಟ್ರಕ್ಷನ್ ಕಂಪೆನಿ ಕಟ್ಟಡ ನಿರ್ಮಾಣದ ಹೊಣೆಹೊತ್ತಿದ್ದು, ಜನವರಿ ಅಂತ್ಯದೊಳಗೆ ನಿರ್ಮಿಸಲು ಗಡುವು ನೀಡಲಾಗಿದೆ. ಕಳೆದ 10 ದಿನಗಳಲ್ಲಿ ಶೇ.70ರಷ್ಟು ಕಾಮಗಾರಿ ಮುಗಿದಿದೆ ಎಂದು ಸೈಟ್ ಮ್ಯಾನೇಜರ್ ಹರ್‌ದೀಪ್ ಸಿಂಗ್ ತಿಳಿಸಿದ್ದಾರೆ.
ಇಮಾನ್ ಅಹ್ಮದ್‌ರನ್ನು ಮುಂಬೈಗೆ ಕರೆ ತರುವ ಸಂಬಂಧ ಡಾ.ಲಕ್ಡಾವಾಲಾ ಅವರು ಏರ್-ಆ್ಯಂಬುಲೆನ್ಸ್ ಹಾಗೂ ಕಮರ್ಶಿಯಲ್ ಏರ್‌ಲೈನರ್ಸ್ ವರ್ಲ್ಡ್ ಜೊತೆಗೆ ಮಾತುಕತೆ ನಡೆಸಿದ್ದಾರೆ.







