ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಅಪರೂಪದ ಫೋಟೊ ಶೇರ್ ಮಾಡಿದ್ದು ಏಕೆ?

ಹೊಸದಿಲ್ಲಿ, ಜ.12: ಭಾರತದ ನೂತನ ಸೀಮಿತ ಓವರ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಅಪರೂಪದ ಫೋಟೊವನ್ನು ಶೇರ್ ಮಾಡುವ ಮೂಲಕ ಹಳೆಯ ನೆನಪಿಗೆ ಜಾರಿದ್ದಾರೆ.
ಈಗಾಗಲೇ ಟೆಸ್ಟ್ ಕ್ರಿಕೆಟ್‌ನ ನಾಯಕನಾಗಿರುವ ಕೊಹ್ಲಿ ಕಳೆದ ವಾರ ಮಹೇಂದ್ರ ಸಿಂಗ್ ಧೋನಿ ದಿಢೀರನೆ ನಾಯಕತ್ವ ತೊರೆದ ಕಾರಣ ಏಕದಿನ ಹಾಗೂ ಟ್ವೆಂಟಿ-20 ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸುತ್ತೇನೆಂದು ನಾನು ನಿರೀಕ್ಷೆಯೇ ಇರಲಿಲ್ಲ ಎಂದು 28ರ ಹರೆಯದ ಕೊಹ್ಲಿ ಬಣ್ಣಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಜೂನಿಯರ್ ಕ್ರಿಕೆಟಿಗನಾಗಿದ್ದ ಸಂದರ್ಭದ ಫೋಟೊವನ್ನು ಶೇರ್ ಮಾಡಿರಬಹುದು.
‘‘ಭಾರತದ ಮೂರು ಮಾದರಿಯ ಕ್ರಿಕೆಟ್‌ನ ನಾಯಕತ್ವವನ್ನು ವಹಿಸಿಕೊಳ್ಳುವುದು ತುಂಬಾ ಅಸಂಭಾವ್ಯವಾಗಿದೆ. ನನ್ನ ಜೀವನದಲ್ಲಿ ಇಂತಹ ದಿನ ಬರುತ್ತದೆಯೆಂದು ಯೋಚಿಸಿಯೇ ಇರಲಿಲ್ಲ. ನಾನು ತಂಡದಲ್ಲಿ ಪ್ರವೇಶ ಪಡೆದಾಗ ಉತ್ತಮ ಪ್ರದರ್ಶನ ನೀಡುವುದು, ಹೆಚ್ಚಿನ ಅವಕಾಶ ಪಡೆಯುವುದು ಹಾಗೂ ಸ್ಥಿರ ವೃತ್ತಿಜೀವನ ರೂಪಿಸಿಕೊಂಡು ತಂಡದ ಗೆಲುವಿನಲ್ಲಿ ಕಾಣಿಕೆ ನೀಡುವುದು ನನ್ನ ಧ್ಯೇಯವಾಗಿತ್ತು’’ಎಂದು ಕೊಹ್ಲಿ ಹೇಳಿದ್ದಾರೆ.
ದಿಲ್ಲಿಯ ದಾಂಡಿಗ ಕೊಹ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಬಲಗೈ ಶೈಲಿಯ ಬ್ಯಾಟ್ಸ್‌ಮನ್ ಕೊಹ್ಲಿ ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧ ಆಟಗಾರನಾಗಿದ್ದಾರೆ. ಮಾತ್ರವಲ್ಲ ಅತ್ಯಂತ ದೊಡ್ಡ ಮಾರುಕಟ್ಟೆ ಹೊಂದಿರುವ ಅಥ್ಲೀಟ್ ಕೂಡ ಆಗಿದ್ದಾರೆ.
‘‘ನನಗೆ ಇದೆಲ್ಲವೂ ದೇವರು ನೀಡಿದ ವರ ಎಂದು ಭಾವಿಸಿರುವೆ. ಏನಾದರೂ ಆಗಬೇಕಾದರೆ ಅದಕ್ಕೊಂದು ಕಾರಣವಿರುತ್ತದೆ. ಅದು ನಿಮ್ಮ ಜೀವನದಲ್ಲಿ ಸರಿಯಾದ ಸಮಯಕ್ಕೆ ನಡೆಯುತ್ತದೆ. ಭಾರತದ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸುವುದು ಒಂದು ಅಪೂರ್ವ ಅವಕಾಶ’’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು







