‘ಮೂಲಗೇಣಿ ಬಾಡಿಗೆ ಕಾಯ್ದೆ ಬಗ್ಗೆ ತಪ್ಪು ಮಾಹಿತಿ’ : ಕ್ಲಾರೆನ್ಸ್ ಪಾಯಸ್
ಮಣಗಳೂರು,ಜ.12: ಮೂಲಗೇಣಿ ಬಾಡಿಗೆ ಕಾಯ್ದೆ ಕುರಿತು ಯಥಾಸ್ಥಿತಿ ಕಾಪಾಡಲು ರಾಜ್ಯ ಹೈಕೋರ್ಟ್ ಆದೇಶ ನೀಡಿದ್ದರೂ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಈ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಮೂಲಗೇಣಿ ಮಾಲಕರ ಸಂಘದ (ಮುಲ್ಗರ್ಸ್ ಅಸೋಸಿಯೇಶನ್) ಅಧ್ಯಕ್ಷ ಕ್ಲಾರೆನ್ಸ್ ಪಾಯಸ್ ಆಪಾದಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಮೂಲಗೇಣಿ ಕಾಯ್ದೆಗೆ ಹೈಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ಸದಸ್ಯರಿಗೆ ಹೇಳಿದೆ. ಆದರೆ ಹೈಕೋರ್ಟ್ ಕಾಯ್ದೆ ಕುರಿತು ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ ಎಂದು ಸ್ಪಷ್ಟಪಡಿಸಿದರು.
ಉಭಯ ಜಿಲ್ಲೆಗಳ ಯಾವುದೇ ತಹಶೀಲ್ದಾರ್ ಮೂಲಗೇಣಿ ಸಂಬಂಧಿಸಿ ಅರ್ಜಿ ಸ್ವೀಕರಿಸುವುದು ಮತ್ತು ಈ ಕುರಿತು ಪ್ರಕ್ರಿಯೆ ನಡೆಸುವುದು ನ್ಯಾಯಾಂಗ ನಿಂದನೆಯಾಗುತ್ತದೆ. ದ.ಕ., ಉಡುಪಿ ಜಿಲ್ಲೆ ಹಾಗೂ ದೇಶದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಸಾಕಷ್ಟು ಮೂಲಗೇಣಿ ಭೂಮಿಯಿದೆ. ಆ ಭೂ ಮಾಲಕರಿಗೆ ಯಾವುದೇ ಪರಿಹಾರ ನೀಡಿಲ್ಲ. ಈ ಕ್ರಮವನ್ನು ವಿರೋಧಿಸಿ ಹೈಕೋರ್ಟ್‌ಗೆ ಮೊರೆ ಹೋಗಲಾಗಿದೆ. ಮೂಲಗೇಣಿ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡರೆ ಸರಕಾರಿ ವೌಲ್ಯದ ಶೇ.40ರಷ್ಟು ಪರಿಹಾರ ನೀಡುತ್ತದೆ. ಆದುದರಿಂದ ಮಾರುಕಟ್ಟೆ ದರದ ಮೂರನೇ ಒಂದು ಭಾಗವನ್ನು ಮೂಲಗೇಣಿ ಮಾಲೀಕರಿಗೆ ಬಾಡಿಗೆದಾರರು ನೀಡಬೇಕು ಎಂದು ಕ್ಲಾರೆನ್ಸ್ ಪಾಯಸ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಫ್ರಿಡಾ ಸಲ್ದಾನಾ, ಕೋಶಾಧಿಕಾರಿ ಗಿಶೆಲ್ಲೆ ಡಿ ಮೆಹ್ತಾ ಮತ್ತಿತರರು ಉಪಸ್ಥಿತರಿದ್ದರು







