ರಾಜ್ಯದ ಎಲ್ಲ ಕಮಿಷನರೇಟ್ ವ್ಯಾಪ್ತಿಯಲ್ಲಿ ಶೀಘ್ರ ಗಸ್ತು ವಾಹನ : ಡಾ.ಜಿ. ಪರಮೇಶ್ವರ್
ಅತ್ಯಾಧುನಿಕ ತಂತ್ರಜ್ಞಾನದ ಗಸ್ತು ವಾಹನಗಳಿಗೆ ಗೃಹ ಸಚಿವರಿಂದ ಚಾಲನೆ

ಮಂಗಳೂರು, ಜ.12: ಕಮಿಷನರೇಟ್ ವ್ಯಾಪ್ತಿಯಲ್ಲಿ ಗಸ್ತು ಕಾರ್ಯವನ್ನು ಪಡಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಗಸ್ತು ವಾಹನಗಳಿಗೆ ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗುರುವಾರ ಚಾಲನೆ ನೀಡಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯ ಎದುರು ಗಸ್ತು ವಾಹನಗಳಿಗೆ ಹಸಿಲು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ 25 ಹೊಸ ಮಾರುತಿ ಎರ್ಟಿಗಾ ವಾಹನಗಳನ್ನು ಸಾರ್ವಜನಿಕ ಸೇವೆಗೆ ಬಿಡಲಾಗಿದೆ ಎಂದರು.
ಕಮಿಷನರೇಟ್ ಇರುವ ನಗರಗಳಲ್ಲಿ ಜಿಪಿಎಸ್ ಹೊಂದಿದ ಗಸ್ತು ವಾಹನಗಳ ವ್ಯವಸ್ಥೆಯನ್ನು ಕಲ್ಪಿಸುವ ಮಹತ್ತರ ಯೋಜನೆಯನ್ನು ರೂಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 300ಕ್ಕೂ ಗಸ್ತು ವಾಹನಗಳು ಕಾರ್ಯಾಚರಣೆಗೆ ಇಳಿದಿವೆ. ಮಂಗಳೂರಿನಲ್ಲಿ ಈಗ 25 ಗಸ್ತು ವಾಹನಗಳಿಗೆ ಚಾಲನೆ ನೀಡಲಾಗಿದೆ. ಉಳಿದಂತೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ ಕಮಿಷನರೇಟ್‌ಗಳಲ್ಲಿ ಗಸ್ತು ವಾಹನಗಳ ಕಾರ್ಯಾಚರಣೆಗೆ ವಾರದೊಳಗೆ ಚಾಲನೆ ನೀಡಲಾಗುವುದು ಎಂದು ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪೊಲೀಸರು ರಾತ್ರಿ ಹೊತ್ತು ಗಾಳಿ, ಮಳೆ, ಚಳಿಯಲ್ಲಿ ಕಷ್ಟಪಟ್ಟು ಅಪರಾಧಗಳನ್ನು ತಡೆಯುವಲ್ಲಿ ಕಾರ್ಯನಿರತರಾಗಿರುತ್ತಾರೆ. ಅಪರಾಧ ನಡೆದ ಸ್ಥಳಕ್ಕೆ ತಕ್ಷಣ ತಲುಪಲು ಇಂತಹ ವಾಹನಗಳ ಆವಶ್ಯಕತೆಯನ್ನು ಮನಗಂಡು ಮತ್ತು ರಾತ್ರಿ ಪಾಳಿಯ ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿಯಾಸಲು ಈ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ವಲಯದಲ್ಲೂ ಇಬ್ಬರು ಗಸ್ತು ಕಾರ್ಯನಿರ್ವಹಿಸುತ್ತಾರೆ. ಅಲ್ಲಿನ ಪ್ರತಿ ಮನೆಗಳು, ಬಂದು ಹೋಗುವವರ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ ಎಂದು ಜಿ. ಪರಮೇಶ್ವರ್ ಹೇಳಿದರು.
ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಗಸ್ತು ವಾಹನದ ಕಾರ್ಯಾಚರಣೆಯಲ್ಲಿ ಅವಕಾಶವನ್ನು ನೀಡಲಾಗುತ್ತದೆ. ಇದರಿಂದ ಮಹಿಳೆಯರಿಗೂ ರಾತ್ರಿ ಸಮಯದಲ್ಲಿ ರಕ್ಷಣೆ ನೀಡುವಂತಹ ಯೋಜನೆ ರೂಪಿಸಲಾಗುತ್ತದೆ. ಸಮಾಜದಲ್ಲಿ ಜನರ ರಕ್ಷಣೆ ಮುಖ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ಈ ಸಂದರ್ಭ ಶಾಸಕರಾದ ಜೆ.ಆರ್. ಲೋಬೊ, ಮೊಯ್ದಿನ್ ಬಾವ, ಪೊಲೀಸ್ ಆಯುಕ್ತ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಗಸ್ತು ವಾಹನದ ಕಾರ್ಯಾಚರಣೆ: ಹೊಸದಾಗಿ ಬಂದಿರುವ ಗಸ್ತು ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅತ್ಯಾಧುನಿಕ ಟ್ಯಾಬ್ಲೆಟ್‌ಗಳನ್ನು ವಾಹನದಲ್ಲಿ ಅಳವಡಿಸಲಾಗಿದ್ದು, ಇದನ್ನು ಪೊಲೀಸ್ ಕಮಿಷನರೇಟ್‌ಗೆ ಸಂಪರ್ಕ ಕಲಿಸಲಾಗಿರುತ್ತದೆ. ಕಂಟ್ರೋಲ್ ರೂಮ್‌ಗೆ ಕರೆ ಬಂದ ತಕ್ಷಣ ಅಪರಾಧ ನಡೆದ ವ್ಯಾಪ್ತಿಯಲ್ಲಿ ಯಾವ ಗಸ್ತು ವಾಹನವಿದೆ ಎನ್ನುವುದು ಕಂಟ್ರೋಲ್ ರೂಮ್ ಮಾಹಿತಿ ಹೋಗುತ್ತದೆ. ಬಳಿಕ ಆ ವ್ಯಾಪ್ತಿಯಲ್ಲಿ ನಡೆದ ಅಪರಾಧದ ಕುರಿತು ಸಮೀಪದ ವಾಹನದ ಸಿಬ್ಬಂದಿಗೆ ನಿರ್ದೇಶನ ನೀಡಲಾಗುತ್ತದೆ. ಪ್ರಾರಂಭದಲ್ಲಿ ಮೂವರು ಸಿಬ್ಬಂದಿಯನ್ನು ಈ ವಾಹನ ಹೊಂದಿದೆ.







