ಪೊಲೀಸ್ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ: ಡಾ.ಜಿ.ಪರಮೇಶ್ವರ್

ಮಂಗಳೂರು, ಜ.12: ರಾಜ್ಯದಲ್ಲಿ 25,000 ಪೊಲೀಸ್ ಸಿಬ್ಬಂದಿಯ ಅಗತ್ಯವಿದ್ದು, ಈಗಾಗಲೇ 21,000 ಪೊಲೀಸ್ ಕಾನ್‌ಸ್ಟೇಬಲ್‌ಗಳ ನೇಮಕ ಪ್ರಕ್ರಿಯೆಯಲ್ಲಿದೆ. ಆ ಪೈಕಿ 16,000 ಸಿಬ್ಬಂದಿಯ ನೇಮಕಾತಿಯಾಗಿದೆ. ಶೇ.70ರಷ್ಟು ಪೊಲೀಸರು ಸೇವೆಗೆ ತೊಡಗಿದ್ದಾರೆ ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರಲ್ಲಿ ಗುರುವಾರ ಪೊಲೀಸ್ ಗಸ್ತು ವಾಹನಗಳಿಗೆ ಹಸಿಲು ನಿಶಾನೆ ತೋರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
1,000 ಎಸ್ಸೈಗಳ ನೇಮಕ ಮಾಡುವ ಪ್ರಕ್ರಿಯೆ ಈಗಾಗಲೇ ನಡೆದಿದ್ದು, ಇದರಲ್ಲಿ 128 ಎಸ್ಸೈಗಳು ಸೇವೆಗೆ ಹಾಜರಾಗಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ನಡೆಯುವ ಕಾರ್ಯಯೋಜನೆಗಳಿಗೆ ಹಣಕಾಸು ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಭಡ್ತಿ, ವೇತನ, ಭತ್ತೆಯನ್ನು ನೀಡುವ ತೀರ್ಮಾನ ಮಾಡಲಾಗಿದೆ. 10 ವರ್ಷಗಳಲ್ಲಿ ಭಡ್ತಿಯನ್ನು ಪಡೆಯುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಜನವರಿಯಿಂದ ಪೊಲೀಸರಿಗೆ 2,000 ರೂ. ಹೆಚ್ಚುವರಿ ಭತ್ತೆಯನ್ನು ನೀಡಲಾಗುವುದು. ಓರ್ವ ಕಾನ್‌ಸ್ಟೇಬಲ್ ನಿವೃತ್ತಿಯಾಗುವಾಗ ಎಎಸ್ಸೈ ಆಗುವ ಅವಕಾಶವನ್ನು ರಾಜ್ಯ ಸರಕಾರ ನೀತಿ ರೂಪಿಸಿದೆ ಎಂದು ಸಚಿವ ಪರಮೇಶ್ವರ್ ನುಡಿದರು.
ಎನ್‌ಎಸ್‌ಜಿಯಂತೆ ಗರುಡ ಫೋರ್ಸ್: ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ 18-21 ವಯಸ್ಸಿನ ಆಯ್ದ ಪೊಲೀಸರು ಗರುಡ ಫೋರ್ಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಕೇಂದ್ರದ ಎನ್‌ಎಸ್‌ಜಿಯಿಂದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತರಬೇತಿಯನ್ನು ನೀಡಲಾಗುವುದು. ಭೂ ಸೇನೆಯ ಬ್ರಿಗೇಡಿಯರ್ ಗರುಡ ಫೋರ್ಸ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಯುವಕನಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ರಾಜು ಕಾಗೆ ಹಾಗೂ ಉಳಿದ 12 ಜನರ ಬಗ್ಗೆ ಸುಳಿವು ಸ್ಕಿಕಿದ್ದು, ಶೀಘ್ರ ಅವರನ್ನು ಅವರನ್ನು ಬಂಧಿಸಲಾಗುತ್ತದೆ. ಕಾರವಾರ ಸಂಸದ ಅನಂತ್ ಕುಮಾರ್ ಹೆಗಡೆಯ ಬಂಧನಕ್ಕೂ ಕ್ರಮ ಜರಗಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







