ಕುಟುಂಬದ ಸದಸ್ಯರನ್ನು ನೆನೆದು ರಸ್ತೆ ಸಂಚಾರಕ್ಕೆ ಮುಂದಾಗಿ: ಲಕ್ಷ್ಮೀನಾಥ ರೆಡ್ಡಿ
28ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

ಮಂಗಳೂರು, ಜ.12: ಪ್ರತಿವರ್ಷ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿದೆ. ರಸ್ತೆ ವಿಸ್ತರಣೆಯಂತಹ ಅಭಿವೃದ್ಧಿ ಕಾರ್ಯಗಳು ನಡೆದರೂ ಕೂಡ ರಸ್ತೆ ಅಪಘಾಗಳು ಕ್ಷೀಣಿಸುತ್ತಿಲ್ಲ. ಚಾಲನೆ ಸಂದರ್ಭ ಕುಟುಂಬದ ಸದಸ್ಯರನ್ನು ನೆನೆಯುವ ಅಗತ್ಯವಿದೆ ಎಂದು ಕಾರ್ಪೊರೇಶನ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಲಕ್ಷ್ಮೀನಾಥ ರೆಡ್ಡಿ ತಿಳಿಸಿದರು.
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ 28ನೆ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2017’ ವನ್ನು ್ನ ಉದ್ಘಾಟಿಸಿ ಅವರು ಮಾತನಾಡಿದರು.
ರಸ್ತೆ ಸುರಕ್ಷತಾ ನಿಯಮಗಳು ಎಷ್ಟೇ ಕಠಿಣವಾಗಿದ್ದರೂ ಅವು ಎಲ್ಲರ ಒಳಿತಿಗಾಗಿ ಇವೆ. ಸುರಕ್ಷತೆ ವಿಧಾನಗಳನ್ನು ಅನುಸರಿಸಿದರೆ ಅಪಘಾತಗಳ ಸಂಖ್ಯೆ ಇಳಿಮುಖದತ್ತ ಸಾಗುತ್ತದೆ. ವಾಹನ ಮಾಲಕರ, ಚಾಲಕರ ಅಸಮರ್ಥ ಚಾಲನೆ, ಮದ್ಯಪಾನ ಮಾಡಿ ಚಾಲನೆ ಮಾಡುವುದರಿಂದ ಬಹಳಷ್ಟು ಜನರ ಸಾವಿಗೆ ಕಾರಣವಾಗುವುದು ದುರಂತ ಎಂದು ಲಕ್ಷ್ಮೀನಾಥ ರೆಡ್ಡಿ ಹೇಳಿದರು.
ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ಡಾ. ಸಂಜೀವ್ ಪಾಟೀಲ್ ಮಾತನಾಡಿ, ರಸ್ತೆ ಅಪಘಾತದಲ್ಲಿ ಪ್ರತಿದಿನ 400 ಜನರು ಸಾವನ್ನಪ್ಪುತ್ತಿದ್ದು, ವಾರ್ಷಿಕ ಸುಮಾರು 1.4 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪುತ್ತಿದ್ದಾರೆ. ಇದು ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಮಾನಾಗಿದೆ. ಕಳೆದ ವರ್ಷ ಮಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ 73 ಜನರು ಮೃತಪಟ್ಟಿದ್ದು, 622 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಪಾದಚಾರಿಗಳು, ಮೋಟಾರ್ ಸೈಕ್ಲಿಸ್ಟ್, ದ್ವಿಚಕ್ರ ವಾಹನ ಸವಾರರು ಹಾಗೂ ಸೈಕೋಗಳು ರಸ್ತೆ ಅಪಘಾತಕ್ಕೀಡಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಅಪಘಾತದ ಬಳಿಕ ಆತನ ಆರೈಕೆಗೆ ಹೆಚ್ಚು ವೆಚ್ಚವನ್ನು ಮಾಡಬೇಕಾಗುತ್ತದೆ. ಜಿಡಿಪಿಯ ಶೇ.3ರಷ್ಟು ಹಣವನ್ನು ರಕ್ಷಣಾ ವಿಭಾಗಕ್ಕೆ ನೀಡಲಾಗುವುದೆಂದು ಬಜೆಟ್‌ನಲ್ಲಿ ಸರಕಾರ ತಿಳಿಸಿದೆ. ರಸ್ತೆ ದಾಟುವಾಗ ಹಾಗೂ ಸಿಗ್ನಲ್‌ಗಳನ್ನು ಅನುಸರಿಸಿದರೆ ಅಪಘಾತ ತಡೆಯಲು ಸಾಧ್ಯ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಡಾ. ಸಂಜೀವ ಪಾಟೀಲ್ ಹೇಳಿದರು.
ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಆಯುಕ್ತ ಆರ್.ಎಂ. ವರ್ಣೇಕರ್ ಮಾತನಾಡಿ, ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ ಇದಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ, ಗುಣಮಟ್ಟದ ರಸ್ತೆ ನಿರ್ಮಾಣದ ಕಾರ್ಯಗಳಾಗಬೇಕಿದೆ. ಸರಕಾರ ಹೆಚ್ಚು ಹಣವನ್ನು ನೀಡುತ್ತಿದ್ದು, ಸರಿಯಾದ ಪ್ರಮಾಣದಲ್ಲಿ ಕಾರ್ಯಗಳು ನಡೆಯಬೇಕಿದೆ. ವಾಹನಗಳ ದಟ್ಟಣೆ, ಅಜಾಗರೂಕತೆಯಿಂದಾಗಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ ಎಂದರು.
ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಅಪಘಾತಕ್ಕೀಡಾಗುವ ಬದಲು ಜಾಗರೂಕತೆಯನ್ನು ಹೊಂದಬೇಕು. ವೇಗದ ಚಾಲನೆಯ ಬದಲು ನಿಗದಿತ ಸಮಯಕ್ಕಿಂತ ಮೊದಲೇ ಹೊರಡಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ದ್ವಿಚಕ್ರ ವಾಹನದವರು ಹೆಲ್ಮೆಟ್, ಕಾರಿನಲ್ಲಿರವವರು ಶೀಟ್‌ಬೆಲ್ಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ರಸ್ತೆ ಬದಿಯ ಸೂಚನಾ ಫಲಕಗಳನ್ನು ಗಮನಿಸಬೇಕು. ಚಾಲನೆ ಸಂದರ್ಭ ಮೊಬೈಲ್ ಬಳಕೆ ಮಾಡಬಾರದು. ನಿಯಮಗಳು ವಾಹನ ಚಾಲಕರಿಗೆ ಅಷ್ಟೇ ಅಲ್ಲ, ಪಾದಚಾರಿಗಳಿಗೂ ಸಂಬಂಧಿಸಿದ್ದಾಗಿದೆ ಎಂದು ಆರ್.ಎಂ. ವರ್ಣೇಕರ್ ತಿಳಿಸಿದರು.
ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಮೋಟಾರ್ ವಾಹನ ನಿರೀಕ್ಷಕ ರವಿಶಂಕರ್ ಪಿ. ಕಾರ್ಯಕ್ರಮ ನಿರೂಪಿಸಿದರು. ಪ್ರಾದೇಶಿಕ ಸಾರಿಗೆ ಅಧೀಕ್ಷಕ ಸತೀಶ್ ವಂದಿಸಿದರು.
ಟ್ರಾಫಿಕ್, ಅಪಘಾತಗಳ ಕುರಿತು ಸುರಕ್ಷತೆಯನ್ನು ಹೊಂದುವ, ಸಂಚಾರ ಚಿಹ್ನೆಗಳು, ಸುರಕ್ಷತಾ ವಿಧಾನಗಳು, ಆಟೊ ಚಾಲಕರ ಸುರಕ್ಷತೆ ಕುರಿತ ಮಾಹಿತಿಯುಳ್ಳ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಎಸಿಪಿಗಳಾದ ಉದಯ ನಾಯಕ್, ಕೆ. ತಿಲಕಚಂದ್ರ, ಎಆರ್‌ಟಿಒ ಜಿ.ಎಸ್. ಹೆಗಡೆ, ಡಿಜಿಎಮ್ ವಿಠ್ಠಲ್ ಶೆಣೈಯವರನ್ನು ಗೌರವಿಸಲಾಯಿತು.







