ಆರ್‌ಟಿಇ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮಾಲೋಚನ ಸಭೆ
ಮಂಗಳೂರು, ಜ.12: ಪಡಿ ಸಂಸ್ಥೆ ಮಂಗಳೂರು ನೇತೃತ್ವದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಹಾಗೂ ಆರ್‌ಟಿಇ ಸ್ಟೂಡೆಂಟ್ಸ್ ಪೇರೆಂಟ್ಸ್ ಅಸೋಸಿಯೇಶನ್ (ರಿ) ಬೆಂಗಳೂರು ಇವುಗಳ ಸಹಭಾಗಿತ್ವದಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಶಿಕ್ಷಣ ಹಕ್ಕು ಕೋಶ-ಸಮಾಲೋಚನಾ ಸಭೆ ಗುರುವಾರ ನಗರದಲ್ಲಿ ನಡೆಯಿತು.
ಸರಕಾರಿ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಉಪನ್ಯಾಸಕ ಶಿವಪ್ರಕಾಶ್ ಮಾತನಾಡಿ ಶಿಕ್ಷಣ ಹಕ್ಕು ಕೋಶವು ಕೇವಲ ಶೇ.25ಕ್ಕೆ ಮೀಸಲಾಗಿರದೆ ಕಾಯ್ದೆಯ ಇತರ ಅಂಶಗಳನ್ನು ಪರಿಗಣಿಸುವಂತಿರಬೇಕು ಎಂದರು.
ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಇಲಾಖೆಯ ಆರ್‌ಟಿಇ ಜಿಲ್ಲಾ ನೋಡಲ್ ಅಧಿಕಾರಿ ಸದಾನಂದ ಪೂಂಜ, ಕ್ಷೇತ್ರ ಸಮನ್ವಯಾಧಿಕಾರಿ ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಪಡಿ ಸಂಸ್ಥೆಯ ಜಯಂತಿ ಸ್ವಾಗತಿಸಿ, ವಂದಿಸಿದರು.
ಆರ್‌ಟಿಇ ಕಾಯ್ದೆಯ ಪ್ರಕಾರ ಶೇ.25 ಮೀಸಲಾತಿಗೆ ಸಂಬಂಧಿಸಿದಂತೆ ಸರಕಾರದಿಂದ ಅಧಿಕೃತ ಸುತ್ತೋಲೆ ಬಂದ ನಂತರ ವ್ಯಾಪಕ ಪ್ರಚಾರವನ್ನು ಶಿಕ್ಷಣ ಇಲಾಖೆ ಹಾಗೂ ಆಸಕ್ತ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಪ್ರಚಾರ ಮಾಡುವುದು.ಈ ಬಗ್ಗೆ ಉಚಿತವಾಗಿ ಸೇವೆ ಸಲ್ಲಿಸಲಿಚ್ಛಿಸುವ ಸಂಘಟನೆಗಳ ಪ್ರತಿನಿಧಿಗಳಿಗೆ ಶಿಕ್ಷಣ ಇಲಾಖೆಯಿಂದ ತರಬೇತಿ ನೀಡುವುದು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅನುಷ್ಠಾನದಲ್ಲಿರುವ ಆರ್‌ಟಿಇ ಕೋಶದ ಸೇವೆಯನ್ನು ಶೇ.25ಮೀಸಲಾತಿ ಸೇವೆ ಮೀಸಲಿಡುವುದರ ಜೊತೆಗೆ ನಿರಂತರವಾಗಿ ಸೇವೆ ನೀಡುವಂತೆ ಮಾಡುವುದು. ಆರ್‌ಟಿಇ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಧಾರ್ ಜೋಡಣೆಗೆ ಸಂಬಂಧಿಸಿ ಜಿಲ್ಲಾದ್ಯಂತ ಸ್ಥಳೀಯವಾಗಿ ಲಭ್ಯವಿರುವ ಅಟಲ್ ಜನಸ್ನೇಹಿ ಕೇಂದ್ರ, ನೆಮ್ಮದಿ ಕೇಂದ್ರ ಮತ್ತು ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹೆಬ್ಬೆರಳಚ್ಚು ಸೇವೆಯನ್ನು ಉಚಿತವಾಗಿ ನೀಡಲು ಸರಕಾರ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಡಿ ಸಂಸ್ಥೆಯ ಮೂಲಕ ಆರ್‌ಟಿಇ ಉಚಿತ ಸಹಾಯ ಕೇಂದ್ರವನ್ನು ಪ್ರಾರಂಭಿಸುವ ಬಗ್ಗೆ ಸಭೆ ನಿರ್ಣಯಿಸಿತು.







