ಸಾಕ್ಷಿ ಮಹಾರಾಜ್ ಹೇಳಿಕೆಗೆ ಚುನಾವಣಾ ಆಯೋಗ ಛೀಮಾರಿ : ಕಠಿಣ ಕ್ರಮದ ಎಚ್ಚರಿಕೆ

ಹೊಸದಿಲ್ಲಿ, ಜ.12: ದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಕಾರಣ ಮುಸ್ಲಿಮರು ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ಹೇಳಿಕೆ ಬಗ್ಗೆ ಚುನಾವಣಾ ಆಯೋಗ ಛೀಮಾರಿ ಹಾಕಿದ್ದು ಮತ್ತೊಮ್ಮೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ತನ್ನ ಎಲ್ಲಾ ಅಧಿಕಾರ ಪ್ರಯೋಗಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.
ತನ್ನ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಚುನಾವಣಾ ಆಯೋಗ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ್ದ ಸಾಕ್ಷಿ ಮಹಾರಾಜ್, ತಾನು ಸಂತರ ಸಮ್ಮೇಳನದಲ್ಲಿ ಈ ಹೇಳಿಕೆ ನೀಡಿದ್ದ ಕಾರಣ ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಆಗದು ಎಂದಿದ್ದರು.
ಆದರೆ ಈ ಉತ್ತರ ತನಗೆ ತೃಪ್ತಿ ತಂದಿಲ್ಲ ಎಂದು ತಿಳಿಸಿರುವ ಚುನಾವಣಾ ಆಯೋಗ, ಚುನಾವಣೆ ವೇಳೆ ಅಥವಾ ಇನ್ನಿತರ ಸಂದರ್ಭ ಧರ್ಮದ ಹೆಸರಿನಲ್ಲಿ ಸಮಾಜದ ವಿವಿಧ ವರ್ಗಗಳ ನಡುವೆ ಹಗೆತನ ಹೆಚ್ಚಿಸುವ ಹೇಳಿಕೆಯನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂಬುದು ತನ್ನ ವಿವೇಚನೆ ಹಾಗೂ ಸುಪ್ರೀಂಕೋರ್ಟ್‌ನ ಅಭಿಪ್ರಾಯವಾಗಿದೆ ಎಂದು ತಿಳಿಸಿದೆ.
ಚುನಾವಣಾ ಆಯೋಗವು ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭೆಗೆ ಚುನಾವಣೆಯನ್ನು ಘೋಷಿಸಿದ ದಿನವಾದ ಜನವರಿ 4ರಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಾಕ್ಷಿ ಮಹಾರಾಜ್‌ಗೆ ಛೀಮಾರಿ ಹಾಕಿದೆ. ಮತ್ತು ಓರ್ವ ಗೌರವಾನ್ವಿತ ರಾಜಕೀಯ ನಾಯಕ/ ಸಂಸದರಾಗಿದ್ದುಕೊಂಡು ನೀವು ಮುಂದಿನ ದಿನಗಳಲ್ಲಿ ನಿಮ್ಮ ನಡೆ ನುಡಿಗಳಲ್ಲಿ ಸಂಯಮ, ಜಾಗರೂಕತೆ ವಹಿಸಬೇಕೆಂದು ಬಯಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ವರ್ತನೆ ತೋರಿದಲ್ಲಿ ತನ್ನೆಲ್ಲಾ ಅಧಿಕಾರ ಬಳಸಿಕೊಂಡು ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತೀವ್ರ ಎಚ್ಚರಿಕೆ ನೀಡಿದೆ.
ಕಳೆದ ವಾರ ಮೀರತ್‌ನಲ್ಲಿ ನಡೆದ ಸಂತರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಕ್ಷಿ ಮಹಾರಾಜ್, ಜನಸಂಖ್ಯೆ ಹೆಚ್ಚಳ ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಹಿಂದೂಗಳು ಇದಕ್ಕೆ ಕಾರಣರಲ್ಲ. 4 ಪತ್ನಿಯರ ಮತ್ತು 40 ಮಕ್ಕಳ ಬಗ್ಗೆ ಮಾತನಾಡುವವರು ಇದಕ್ಕೆ ಕಾರಣ ಎಂದು ಹೇಳಿದ್ದರು. ರಾಜಕೀಯ ಪಕ್ಷಗಳು ಅಥವಾ ರಾಜಕಾರಣಿಗಳು ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ಮತ ಯಾಚಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಮರುದಿನ ಸಾಕ್ಷಿ ಮಹಾರಾಜ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.







