ಪಕ್ಷಗಳಿಗೆ ಆದಾಯ ತೆರಿಗೆ ವಿನಾಯಿತಿ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಲ್ಲಿ ತಿರಸ್ಕೃತ

ಹೊಸದಿಲ್ಲಿ,ಜ.12: ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಗಳಿಗೆ ಆದಾಯ ತೆರಿಗೆ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವ ನಿರ್ಧಾರವು ಕಾರ್ಯಾಂಗದ ಕ್ರಮವಾಗಿದೆ ಮತ್ತು ಈ ಕ್ರಮದಿಂದ ಆದಾಯ ತೆರಿಗೆ ಕಾಯ್ದೆ ಮತ್ತು ಜನ ಪ್ರಾತಿನಿಧ್ಯ ಕಾಯ್ದೆಗಳ ಸಂಬಂಧಿತ ನಿಯಮಗಳು ಉಲ್ಲಂಘನೆಯಾಗಿಲ್ಲ. ಈ ವಿಷಯದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸುವಂತಿಲ್ಲ ಎಂದು ಮುಖ್ಯ ನ್ಯಾಯಾಧೀಶ ಜೆ.ಎಸ್.ಖೇಹರ ಮತ್ತು ಡಿ.ವೈ.ಚಂದ್ರಚೂಡ ಅವರ ಪೀಠವು ಹೇಳಿತು. ರಾಜಕೀಯ ಪಕ್ಷಗಳಿಗೆ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಹಣಕಾಸಿನ ಅಗತ್ಯವಿರುತ್ತದೆ ಎಂದೂ ಅದು ತಿಳಿಸಿತು.
ಆದಾಯ ತೆರಿಗೆ ವಿನಾಯಿತಿಯ ಈ ಸೌಲಭ್ಯ ಪ್ರಜೆಗಳಿಗೆ ಲಭ್ಯವಿಲ್ಲ, ಹೀಗಾಗಿ ರಾಜಕೀಯ ಪಕ್ಷಗಳಿಗೆ ಈ ವಿನಾಯಿತಿಯನ್ನು ನೀಡಿರುವುದು ಸಾಂವಿಧಾನಿಕ ಯೋಜನೆಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರಾದ ನ್ಯಾಯವಾದಿ ಎಂ.ಎಲ್.ಶರ್ಮಾ ಅವರು ಆಪಾದಿಸಿದ್ದರು.
ನೋಟು ರದ್ದತಿಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು,ಅವುಗಳಿಗೆ ದೇಣಿಗೆಯ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶ ನೀಡುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು.







