ಇಮೇಲ್‌ಗೆ ರಶ್ಯ ಕನ್ನ ಹಾಕಿದ್ದು ಹೌದು : ಮೊದಲ ಬಾರಿಗೆ ಒಪ್ಪಿಕೊಂಡ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್

ನ್ಯೂಯಾರ್ಕ್, ಜ. 12: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿ ಮತ್ತು ಇತರ ಉನ್ನತ ಡೆಮಾಕ್ರಟಿಕ್ ನಾಯಕರ ಇಮೇಲ್‌ಗಳಿಗೆ ರಶ್ಯ ಕನ್ನ ಹಾಕಿತ್ತು ಎಂಬುದನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಒಪ್ಪಿಕೊಂಡರು.
‘‘ಅದು ರಶ್ಯ ಎಂದು ನನಗನಿಸುತ್ತದೆ’’ ಎಂದರು.ಆದಾಗ್ಯೂ, ಇತರ ದೇಶಗಳೂ ಅಮೆರಿಕದ ಮೇಲೆ ಬೇಹುಗಾರಿಕೆ ನಡೆಸುತ್ತಿವೆ ಎಂದು ಅವರು ಹೇಳಿದರು ಹಾಗೂ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಉತ್ತಮ ಸಂಬಂಧ ಹೊಂದುವ ತನ್ನ ಉದ್ದೇಶವನ್ನು ಅವರು ಸಮರ್ಥಿಸಿಕೊಂಡರು.
‘‘ಡೊನಾಲ್ಡ್ ಟ್ರಂಪ್‌ರನ್ನು ಪುಟಿನ್ ಮೆಚ್ಚಿದರೆ, ನಾನು ಅದನ್ನು ಆಸ್ತಿ ಎಂಬುದಾಗಿ ಪರಿಗಣಿಸುತ್ತೇನೆ ಹೊರತು ಹೊರೆ ಎಂಬುದಾಗಿ ಅಲ್ಲ’’ ಎಂದರು.
ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ನ್ಯೂಯಾರ್ಕ್‌ನ ಅವರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಮಾರು 250 ವರದಿಗಾರರು ಕಿಕ್ಕಿರಿದು ಸೇರಿದ್ದರು.
ಚುನಾವಣಾ ಪ್ರಚಾರದ ವೇಳೆ, ನಿಮ್ಮ ಅಥವಾ ನಿಮ್ಮ ಪ್ರಚಾರ ತಂಡದ ಪ್ರತಿನಿಧಿಯೊಬ್ಬರು ರಶ್ಯದೊಂದಿಗೆ ಸಂಪರ್ಕದಲ್ಲಿದ್ದರೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಲು ಟ್ರಂಪ್ ನಿರಾಕರಿಸಿದರು.







