ಮೆಕ್ಸಿಕೊದಿಂದ ಗೋಡೆ ನಿರ್ಮಾಣ ವೆಚ್ಚ ವಸೂಲು: ಟ್ರಂಪ್

ನ್ಯೂಯಾರ್ಕ್, ಜ. 12: ತಾನು ಅಧಿಕಾರಕ್ಕೆ ಬಂದ ಬಳಿಕ ಮೆಕ್ಸಿಕೊ ಜೊತೆಗಿನ ಗಡಿಯುದ್ದಕ್ಕೂ ಗೋಡೆ ಕಟ್ಟುವುದು ಖಚಿತ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಡೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಮೆಕ್ಸಿಕೊದಿಂದ ವಸೂಲು ಮಾಡಲಾಗುವುದು ಎಂದರು.
''ಅಧಿಕಾರಕ್ಕೆ ಬಂದ ತಕ್ಷಣ ಈ ವಿಷಯದಲ್ಲಿ ಮೆಕ್ಸಿಕೊ ಜೊತೆ ನಾವು ಸಂಧಾನ ಆರಂಭಿಸುತ್ತೇವೆ. ಸಂಧಾನ ಮುಗಿಯಲು ನಾನು ಒಂದೂವರೆ ವರ್ಷ ಕಾಯಬಲ್ಲೆ'' ಎಂದು ಅವರು ತಿಳಿಸಿದರು.
''ನಾವು ಗೋಡೆ ನಿರ್ಮಾಣವನ್ನು ಆರಂಭಿಸುತ್ತೇವೆ. ಇದರ ವೆಚ್ಚವನ್ನು ಮೆಕ್ಸಿಕೊ ನಮಗೆ ಕೊಡಬೇಕು. ವೆಚ್ಚವನ್ನು ಕೊಡಲು ಅದರ ಬಳಿ ಹಲವಾರು ವಿಧಾನಗಳಿವೆ. ಯಾವುದಾದರೂ ಒಂದು ರೂಪದಲ್ಲಿ ಅದು ನಮಗೆ ಕೊಡಬೇಕು'' ಎಂದರು.
ಗೋಡೆಗೆ ಹಣ ನೀಡುವುದಿಲ್ಲ ಆದರೆ ಉತ್ತಮ ಬಾಂಧವ್ಯ ಬೇಕು: ಮೆಕ್ಸಿಕೊ
ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ನಿರ್ಮಿಸುವ ಗೋಡೆಯ ವೆಚ್ಚವನ್ನು ಮೆಕ್ಸಿಕೊ ಪಾವತಿಸಬೇಕು ಎಂಬ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬೇಡಿಕೆಯನ್ನು ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನ ನೀಟೊ ಬುಧವಾರ ಮತ್ತೊಮ್ಮೆ ತಿರಸ್ಕರಿಸಿದ್ದಾರೆ.
ಆದಾಗ್ಯೂ, ಅಮೆರಿಕದ ನಿಯೋಜಿತ ಅಧ್ಯಕ್ಷರೊಂದಿಗೆ ತನ್ನ ದೇಶ ಉತ್ತಮ ಬಾಂಧವ್ಯವನ್ನು ಹೊಂದಲು ಬಯಸುತ್ತದೆ ಎಂದು ಹೇಳಿದರು.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿದ ಮೆಕ್ಸಿಕೊ ಅಧ್ಯಕ್ಷ, ತನ್ನ ಸರಕಾರ ಅಮೆರಿಕದ ಮುಂದಿನ ಸರಕಾರದೊಂದಿಗೆ 'ಮುಕ್ತ ಹಾಗೂ ಸಮಗ್ರ ಮಾತುಕತೆ'ಯನ್ನು ಬಯಸುತ್ತದೆ ಎಂದರು.







