‘ಆತ್ಮರಕ್ಷಣೆ’ಗಾಗಿ 33 ನಾಗರಿಕರನ್ನು ಕೊಂದಿದ್ದ ಅಮೆರಿಕ, ಅಫ್ಘಾನ್ ಪಡೆಗಳು : ಖಚಿತಪಡಿಸಿದ ನ್ಯಾಟೊ

ಕಾಬೂಲ್ (ಅಫ್ಘಾನಿಸ್ತಾನ), ಜ. 12: ಅಫ್ಘಾನಿಸ್ತಾನದ ಕುಂಡುಝ್‌ನಲ್ಲಿ ಕಳೆದ ವರ್ಷ ಅಮೆರಿಕದ ಪಡೆಗಳು ‘ಆತ್ಮರಕ್ಷಣೆಗಾಗಿ’ ಒಂದೇ ದಾಳಿಯಲ್ಲಿ 33 ನಾಗರಿಕರನ್ನು ಕೊಂದಿವೆ ಎಂಬುದನ್ನು ನ್ಯಾಟೊ ಗುರುವಾರ ಖಚಿತಪಡಿಸಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪಡೆಗಳು ನಡೆಸಿದ 15 ವರ್ಷಗಳ ಕಾರ್ಯಾಚರಣೆಯ ವೇಳೆ ಸಂಭವಿಸಿದ ಅತ್ಯಂತ ವಿವಾದಾಸ್ಪದ ದಾಳಿಗಳ ಪೈಕಿ ಇದು ಒಂದಾಗಿದೆ.
ಹಿಂಸಾಗ್ರಸ್ತ ಕುಂಡುಝ್‌ನ ಗ್ರಾಮವೊಂದರಲ್ಲಿ ನಾಗರಿಕರ ಮನೆಗಳಲ್ಲಿ ಅಡಗಿದ ತಾಲಿಬಾನಿಗಳ ವಿರುದ್ಧ ಅಮೆರಿಕ ಮತ್ತು ಅಫ್ಘಾನ್ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು.
ತಾಲಿಬಾನಿಗಳು ಗುಂಡು ಹಾರಿಸುತ್ತಿದ್ದ ಕಟ್ಟಡಗಳ ಒಳಗೆ ನಾಗರಿಕ ಪುರುಷರು, ಮಹಿಳೆಯರು ಮತ್ತು ಮಕ್ಕಳು ಇದ್ದರು ಎಂದು ಭಾವಿಸಲಾಗಿದೆ ಎಂದು ವರದಿ ತಿಳಿಸಿದೆ.
ಆ ದಾಳಿಯಲ್ಲಿ ಇಬ್ಬರು ಅಮೆರಿಕನ್ ಮತ್ತು ಮೂವರು ಅಫ್ಘಾನ್ ಸೈನಿಕರೂ ಪ್ರಾಣ ಕಳೆದುಕೊಂಡಿದ್ದಾರೆ.
ಆ ಅವಧಿಯಲ್ಲಿ ನಾಗರಿಕರ ಮಾರಣಹೋಮವು ಭಾರೀ ವಿವಾದವನ್ನೆಬ್ಬಿಸಿತ್ತು. ಬಲಿಪಶುಗಳ ಸಂಬಂಧಿಕರು ಛಿದ್ರಗೊಂಡ ಮಕ್ಕಳ ದೇಹಗಳನ್ನು ತೆರೆದ ವಾಹನಗಳಲ್ಲಿಟ್ಟು ಕುಂಡುಝ್ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು.
‘‘33 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 27 ಮಂದಿ ಗಾಯಗೊಂಡಿದ್ದಾರೆ ಎನ್ನುವುದು ತನಿಖೆಯಲ್ಲಿ ಸಾಬೀತಾಯಿತು’’ ಎಂದು ನ್ಯಾಟೊ ಅಫ್ಘಾನ್ ಘಟಕ ಹೇಳಿಕೆಯೊಂದರಲ್ಲಿ ತಿಳಿಸಿದೆ.







