ಡಿಜಿಟಲ್;ನಗದು ರಹಿತ ಆರ್ಥಿಕ ವ್ಯವಹಾರಕ್ಕೆ ಹೆಚ್ಚಿನ ಒತ್ತು - ನಿರ್ಮಲಾ ಸೀತಾರಾಮನ್

ಮಂಗಳೂರು,ಜ.12:ನೋಟುಗಳ ಮೂಲಕ ನಡೆಯುವ ನಗದು ಆರ್ಥಿಕ ವ್ಯವಹಾರ ದೇಶದಲ್ಲಿ ಕಪ್ಪು ಹಣ ಚಲಾವಣೆ ಕಾರಣವಾಗಿದೆ ಈ ನಿಟ್ಟಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಹಾರ ಅನುಷ್ಠಾನಗೊಳ್ಳಲು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿರುವುದು ಉತ್ತಮ ಹೆಜ್ಜೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದ.ಕ ಜಿಲ್ಲಾ ಬಿಜಿಪಿ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡ ನೋಟು ಅಪನಗದೀಕರಣ ಬಗೆಗಿನ ಸಂವಾದ ಗೊಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನಗದು ಆರ್ಥಿಕ ವ್ಯವಹಾರದ ಪರಿಣಾಮವಾಗಿ ನೋಟು ಅಪವೌಲ್ಯವಾದ 15 ದಿನಗಳಲ್ಲಿ ದೇಶದಲ್ಲಿ ಕೆಲವು ಕಡೆ ಬಾತ್‌ರೂಂ,ಟಾಯಿಲೆಟ್‌ಗಳಲ್ಲಿ ಹಣವನ್ನು ಅಡಗಿಸಿಟ್ಟು ಕಪ್ಪು ಹಣ ಚಲಾವಣೆ ಮಾಡುತ್ತಿರುವವರ ವ್ಯವಹಾರ ಸಾಕಷ್ಟು ಪತ್ತೆಯಾಗಿದೆ.ನಗದು ರಹಿತ ಆರ್ಥಿಕ ಚಟುವಟಿಕೆ ದೇಶದಲ್ಲಿ ಬೆಳೆಯಲು ಜನರ ಮನೋಭಾವದಲ್ಲಿ ಬದಲಾವಣೆಯಾಗಬೇಕಾಗಿದೆ.
ಪ್ರಪಂಚದ ಮುಂದುವರಿದ ದೇಶಗಳಲ್ಲಿ ನಗದು ರಹಿತ ಆರ್ಥಿಕ ವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿದೆ.ಈ ದೇಶಗಳಲ್ಲಿ ಹಣದ ಮೂಲಕ ಶೇ 7ರಷ್ಟು ಆರ್ಥಿಕ ವ್ಯವಹಾರ ನಡೆದರೆ ಭಾರತದಲ್ಲಿ 2012ರಲ್ಲಿ ನಡೆಸಿದ ಸಮೀಕ್ಷೆ,2014ರ ಸಮೀಕ್ಷೆಯ ಅಂಕಿ ಅಂಶದ ಪ್ರಕಾರ ಶೇ 80-86ರಷ್ಟು ಆರ್ಥಿಕ ವ್ಯವಹಾರ ನಗದು ರೂಪದಲ್ಲಿದೆ.
ಇದರಿಂದಾಗಿ ಆರ್ಥಿಕ ವ್ಯವಹಾರದಲ್ಲಿ ಶೇ 19-26ರಷ್ಟು ಕಪ್ಪು ಹಣ ಚಲಾವಣೆಯಲ್ಲಿರುವುದು ಸಮೀಕ್ಷೆಯ ವರದಿಗಳಿಂದ ಬೆಳಕಿಗೆ ಬಂದಿದೆ.ದೇಶದ ನಗದು ವ್ಯವಹಾರದಲ್ಲಿ ಹೆಚ್ಚು ಚಲಾವಣೆಯಲ್ಲಿದ್ದ ನೋಟುಗಳು 1000ಮತ್ತು 500ರೂ ಗಳಾದ್ದಾಗಿತ್ತು ಈ ಹಿನ್ನೆಲೆಯಲ್ಲಿ ಅವುಗಳನ್ನು ಅಪನಗದೀಕರಣ ಗೊಳಿಸುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ.ಈ ಕ್ರಮದಿಂದ ಕೆಲವು ಸಮಸ್ಯೆಗಳಾದರೂ ದೇಶದ ಪ್ರಧಾನಿಗೆ ಬೆಂಬಲ ನಿಡುತ್ತಿರುವ ಜನಸಾಮಾನ್ಯರನ್ನು ತಾನು ಅಭಿನಂದಿಸುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಅಡ್ವಾಣಿಯವರು ರಥಯಾತ್ರೆ ಆರಂಭಿಸಿದಂತೆ ದೇಶದಲ್ಲಿ ಕಪ್ಪು ಹಣ ತಡೆಯಲು ಪ್ರಧಾನಿ ಮೋದಿಯವರು 1000,500ರೂ ಗಳ ಹಳೆ ನೋಟುಗಳನ್ನು ಅಮಾನ್ಯಗೊಳಿಸುವ ಕ್ರಮಕೈಗೊಂಡರು.ಇದು ಒಂದು ದಿನದ ನಿರ್ಧಾರವಲ್ಲ ಜನಧನ ಖಾತೆ ಆರಂಭಿಸುವ ಸೂಚನೆ ನೀಡುವ ಸಂದರ್ಭದಿಂದಲೇ ಈ ಪ್ರಕ್ರೀಯೆ ಆರಂಭಗೊಂಡಿದೆ.
ದೇಶದಲ್ಲಿ ಕಪ್ಪು ಹಣ ಚಲಾವಣೆಯಲ್ಲಿ ನಿಯಂತ್ರಿಸಲು,ನಕಲಿ ನೋಟಿನ ಹಾವಳಿ,ಭಯೋತ್ಪಾದನೆ ತಡೆಯಲು ಹಾಗೂ ಡ್ರಗ್ ಮಾಫಿಯಾ ತಡೆಯಲು ಸರಕಾರದ ಕ್ರಮ ಸರಿಯಾಗಿದೆ.ಸ್ವಿಝ್ ಬ್ಯಾಂಕ್ ಖಾತೆಯಲ್ಲಿರುವ ಭಾರತೀಯರ ಕಪ್ಪು ಹಣದ ಬಗ್ಗೆಯೂ ಅಲ್ಲಿನ ಸರಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ.ದೇಶದ ಆರ್ಥಿಕ ವ್ಯವಹಾರವನ್ನು ನಗದಿತ ಆರ್ಥಿಕ ಸಂಸ್ಥೆಗಳ ಒಳಗೆ ತರಲು ಡಿಜಿಟಲ್ ಆರ್ಥಿಕ ವ್ಯವಹಾರಕ್ಕೆ ದೇಶದ ಜನತೆಗೆ ಸಿದ್ದರಾಗಬೇಕಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮಾರ್ಚ್ ಅಂತ್ಯದೊಳಗೆ ದ.ಕ ಜಿಲ್ಲೆ ಸಂಪೂರ್ಣ ಡಿಜಿಟಲ್ ಆರ್ಥಿಕ ವ್ಯವಹಾರದ ಜಿಲ್ಲೆಯಾಗಲಿದೆ:- ಮುಂದಿನ ಮಾರ್ಚ್ ಅಂತ್ಯದೊಳಗೆ ದ.ಕ ಜಿಲ್ಲೆಯ ಆರ್ಥಿಕ ವ್ಯವಹಾರ ಸಂಪೂರ್ಣ ಡಿಜಿಟಲೀಕರಣಗೊಳ್ಳುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.ಬಳ್ಪ ಗ್ರಾಮವನ್ನು ಸಂಪೂರ್ಣ ಡಿಜಿಟಲ್ ಗ್ರಾಮವಾಗಿ ಪರಿವರ್ತಿಸಲು ಈಗಾಗಲೇ ಕ್ರಮ ಕೈ ಗೊಳ್ಳಲಾಗಿದೆ.
ನೋಟು ಅಪನಗದೀಕರಣ ಯೋಜನೆಗೆ ಜಿಲ್ಲೆಯಲ್ಲಿಯೂ ಜನತೆ ಬೆಂಬಲ ನೀಡಿದ್ದಾರೆ ಎಂದು ಪ್ರಧಾನಿ ತನ್ನ ಮನಕೀ ಭಾತ್‌ನಲ್ಲಿಯೂ ಪ್ರಸ್ತಾಪಿಸಿದ್ದಾರೆ.ಜಿಲ್ಲೆಗೆ ವಿವಿಧ ಯೋಜನೆಯ ಮೂಲಕ 12 ಸಾವಿರ ಕೋಟಿ ರೂ ಮಂಜೂರಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಿವರ ನೀಡಿದರು.
ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು,ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್,ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ,ಉಮಾನಾಥ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.







