ಅಧ್ಯಕ್ಷತೆಗೆ ಸ್ಪರ್ಧಿಸುವ ಇಂಗಿತದೊಂದಿಗೆ ದ.ಕೊರಿಯಕ್ಕೆ ವಾಪಸಾದ ಮೂನ್

ಸಿಯೋಲ್ (ದಕ್ಷಿಣ ಕೊರಿಯ), ಜ. 12: ವಿಶ್ವಸಂಸ್ಥೆಯ ಮಾಜಿ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ದಕ್ಷಿಣ ಕೊರಿಯದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚುತ್ತಿರುವಂತೆಯೇ, ಅವರು ಗುರುವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ.
‘‘ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ನನ್ನ ಅನುಭವ ಮತ್ತು ಜ್ಞಾನವನ್ನು ಅತ್ಯುತ್ತಮ ರೀತಿಯಲ್ಲಿ ಹೇಗೆ ಬಳಸಬಹುದು ಎಂಬ ಬಗ್ಗೆ ನಾನು ಗಂಭೀರವಾಗಿ ಯೋಚಿಸಿದ್ದೇನೆ’’ ಎಂದು ಇಲ್ಲಿಗೆ ಆಗಮಿಸಿದ ಬಳಿಕ ಟೆಲಿವಿಶನ್‌ನಲ್ಲಿ ಮಾತನಾಡಿದ ಮೂನ್ ಹೇಳಿದರು.
ಇಲ್ಲಿನ ಇಂಚಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಮೂನ್, ‘ನಿಸ್ವಾರ್ಥ ನಿರ್ಧಾರ’ವೊಂದನ್ನು ತೆಗೆದುದಕೊಳ್ಳುವ ಮೊದಲು ಈ ವಾರ ತಾನು ಜನರನ್ನು ಭೇಟಿಯಾಗುತ್ತೇನೆ ಎಂದರು.
ಭ್ರಷ್ಟಾಚಾರ ಆರೋಪದಲ್ಲಿ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಗಿರುವ ಅಧ್ಯಕ್ಷೆ ಪಾರ್ಕ್ ಗುಯನ್-ಹೈ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಒತ್ತಾಯಿಸಿ ಪ್ರತಿ ವಾರ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲೇ ಮೂನ್ ತನ್ನ ಸ್ವದೇಶಕ್ಕೆ ವಾಪಸಾಗಿರುವುದು ಗಮನಾರ್ಹವಾಗಿದೆ.





