ತಪ್ಪಿತಸ್ಥ ವಾಹನ ಚಾಲಕರ ಪರವಾನಿಗೆ ಅಮಾನತಿಗೆ ಕೇಂದ್ರದ ನಿರ್ದೇಶ

ಹೊಸದಿಲ್ಲಿ,ಜ.12: ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ಪ್ರಯತ್ನವಾಗಿ ಕೇಂದ್ರವು ಮಿತಿ ಮೀರಿದ ವೇಗ,ಸಿಗ್ನಲ್ ಉಲ್ಲಂಘನೆ, ಓವರ್‌ಲೋಡ್ ಮತ್ತು ಚಾಲನೆಯ ವೇಳೆ ಮೊಬೈಲ್‌ನಲ್ಲಿ ಮಾತುಕತೆ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ತಪ್ಪಿತಸ್ಥ ವಾಹನ ಚಾಲಕರ ಚಾಲನಾ ಪರವಾನಿಗೆಗಳನ್ನು ಕನಿಷ್ಠ ಮೂರು ತಿಂಗಳ ಅವಧಿಗೆ ಅಮಾನತುಗೊಳಿಸುವಂತೆ ರಾಜ್ಯಗಳಿಗೆ ನಿರ್ದೇಶ ನೀಡಿದೆ.
ಇಲ್ಲಿ ಮಂಗಳವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವಂತೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಾರಿಗೆ ಸಚಿವರಿಗೆ ಸೂಚಿಸಿದರು.
ಖಾಯಂ ಚಾಲನಾ ಪರವಾನಿಗೆಗಳನ್ನು ನೀಡುವ ಪ್ರಕ್ರಿಯೆಯನ್ನು ಬಿಗುಗೊಳಿಸುವಂತೆ ರಾಜ್ಯಗಳಿಗೆ ನಿರ್ದೇಶ ನಿಡಿದ ಅವರು, ಮೋಟಾರು ವಾಹನ ಕಾಯ್ದೆಯ ಕಲಂ 19 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಾವಳಿಯ ನಿಯಮ 21ರಡಿ ತಪ್ಪಿತಸ್ಥ ವಾಹನ ಚಾಲಕರ ಚಾಲನಾ ಪರವಾನಿಗೆಯನ್ನು ಅಮಾನತುಗೊಳಿಸಬಹುದಾಗಿದೆ ಎಂದು ತಿಳಿಸಿದರು.





