ಸಿಎಸ್‌ನ ಚಂದ್ರಶೇಖರನ್‌ಗೆ ಒಲಿದ ಟಾಟಾ ಸನ್ಸ್‌ನ ಅಧ್ಯಕ್ಷತೆ

ಮುಂಬೈ,ಜ.12: ಟಾಟಾ ಸನ್ಸ್ ಗುರುವಾರ ಟಿಸಿಎಸ್‌ನ ಸಿಇಒ ಹಾಗೂ ಆಡಳಿತ ನಿರ್ದೇಶಕ ನಾಗರಾಜನ್ ಚಂದ್ರಶೇಖರನ್ ಅವರನ್ನು ತನ್ನ ನೂತನ ಅಧ್ಯಕ್ಷರನ್ನಾಗಿ ಹೆಸರಿಸಿದೆ. ಎರಡು ತಿಂಗಳ ಹಿಂದೆ ಆಗ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿಯವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.
‘ಚಂದ್ರ’ಎಂದೇ ಜನಪ್ರಿಯರಾಗಿರುವ ಚಂದ್ರಶೇಖರನ್(54) ಕಳೆದ ವರ್ಷ ಮಿಸ್ತ್ರಿಯವರ ವಜಾದ ಬಳಿಕ ಅ.24ರಂದು ಅಧಿಕಾರ ಸ್ವೀಕರಿಸಿದ್ದ ರತನ್ ಟಾಟಾರಿಗೆ ವಿಶ್ರಾಂತಿ ನೀಡಲಿದ್ದಾರೆ.
ಟಾಟಾ ಗುಂಪಿನ ಹಿರಿಯ ಅಧಿಕಾರಿಯಾಗಿರುವ ಚಂದ್ರಶೇಖರನ್‌ಗೆ ಆಡಳಿತದ ಚುಕ್ಕಾಣಿಯನ್ನು ನೀಡುವ ನಿರ್ಧಾರವನ್ನು ಇಂದಿಲ್ಲಿ ನಡೆದ ಟಾಟಾ ಸನ್ಸ್ ಆಡಳಿತ ಮಂಡಳಿಯು ತೆಗೆದುಕೊಂಡಿತು.
ರತನ್ ಟಾಟಾ, ಟಿವಿಎಸ್ ಸಮೂಹದ ವರಿಷ್ಠ ವೇಣು ಶ್ರೀನಿವಾಸನ್, ಬೇನ್ ಕ್ಯಾಪಿಟಲ್‌ನ ಅಮಿತ್ ಚಂದ್ರ, ಮಾಜಿ ರಾಜತಾಂತ್ರಿಕ ರೊನೆನ್ ಸೇನ್ ಮತ್ತು ಲಾರ್ಡ್ ಕುಮಾರ ಭಟ್ಟಾಚಾರ್ಯ ಅವರನ್ನೊಳಗೊಂಡ ಐವರು ಸದಸ್ಯರ ಆಯ್ಕೆ ಸಮಿತಿಯು ತನಗೆ ನೀಡಲಾಗಿದ್ದ ನಾಲ್ಕು ತಿಂಗಳ ಗಡುವಿಗೆ ಮೊದಲೇ ಚಂದ್ರಶೇಖರನ್ ಅವರನ್ನು ಆಯ್ಕೆ ಮಾಡಿದೆ.
ಚಂದ್ರಶೇಖರನ್ ಅವರು 2009ರಿಂದ ಟಾಟಾ ಸಮೂಹದ ಖಜಾನೆ ಎಂದೇ ಪರಿಗಣಿಸಲಾಗಿರುವ ಪ್ರತಿಷ್ಠಿತ ಐಟಿ ಕಂಪನಿ ಟಿಸಿಎಸ್‌ನ ಮುಖ್ಯಸ್ಥರಾಗಿದ್ದಾರೆ, ಮಿಸ್ತ್ರಿಯವರ ವಜಾದ ಮರುದಿನ, 2016,ಅ.25ರಂದು ಅವರನ್ನು ಟಾಟಾ ಸನ್ಸ್‌ನ ಆಡಳಿತ ಮಂಡಲಿಯ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿತ್ತು.
ತನ್ನನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿರುವ ಮಿಸ್ತ್ರಿ ಜೊತೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಾಧಿಕರಣದಲ್ಲಿ ನಡೆಯುತ್ತಿರುವ ಕಾನೂನು ಸಮರದ ನಡುವೆಯೇ ಉಪ್ಪಿನಿಂದ ಸಾಫ್ಟ್‌ವೇರ್‌ವರೆಗೆ ಹೆಸರು ಮಾಡಿರುವ 103 ಶತಕೋಟಿ ಡಾ.ಮೌಲ್ಯದ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಚಂದ್ರಶೇಖರನ್ ನೇಮಕಗೊಂಡಿದ್ದಾರೆ.
ಬೃಹತ್ ಹೊಣೆ:ಚಂದ್ರ
ತನ್ನಲ್ಲಿಟ್ಟಿರುವ ವಿಶ್ವಾಸಕ್ಕೆ ಟಾಟಾ ಸನ್ಸ್ ಮತ್ತು ರತನ ಟಾಟಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವ ಚಂದ್ರಶೇಖರನ್, ಅಧ್ಯಕ್ಷ ಹುದ್ದೆ ಬೃಹತ್ ಹೊಣೆಗಾರಿಕೆಗಳೊಂದಿಗೆ ತನ್ನ ಹೆಗಲೇರುತ್ತಿದೆ ಎನ್ನುವುದು ತನಗೆ ಅರಿವಿದೆ ಮತ್ತು ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.







