ಕೊಪಾ ಡೆಲ್ ರೇ: ಮೆಸ್ಸಿ ಫ್ರೀ-ಕಿಕ್, ಬಾರ್ಸಿಲೋನ ಕ್ವಾರ್ಟರ್ ಫೈನಲ್‌ಗೆ

ಬಾರ್ಸಿಲೋನ, ಜ.12: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಬಾರಿಸಿದ ಆಕರ್ಷಕ ಗೋಲು ನೆರವಿನಿಂದ ಬಾರ್ಸಿಲೋನ ತಂಡ ಚಾಂಪಿಯನ್ ಅಟ್ಲೆಟಿಕ್ ಬಿಲ್ಬಾವೊ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿದೆ. 4-3 ಗೋಲು ಸರಾಸರಿಯ ಹಿನ್ನೆಲೆಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.
ಬಾರ್ಸಿಲೋನ ತಂಡ ಬಿಲ್ಬಾವೊ ತಂಡದ ವಿರುದ್ಧ ಮೊದಲ ಚರಣದ ಪಂದ್ಯವನ್ನು 2-1 ಅಂತರದಿಂದ ಸೋತಿತ್ತು. ಇದೀಗ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಬುಧವಾರ ಇಲ್ಲಿ ನಡೆದ ಅಂತಿಮ 16ರ ಸುತ್ತಿನ ಪಂದ್ಯದ 36ನೆ ನಿಮಿಷದಲ್ಲಿ ಮ್ಯಾಜಿಕ್ ಗೋಲು ಬಾರಿಸಿದ ಲೂಯಿಸ್ ಸುಯರೆಝ್ ಬಾರ್ಸಿಲೋನಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಸುಯರೆಝ್ ಬಾರ್ಸಿಲೋನ ಪರ ದಾಖಲಿಸಿದ 100ನೆ ಗೋಲು ಇದಾಗಿತ್ತು.
47ನೆ ನಿಮಿಷದಲ್ಲಿ ಗೋಲು ಬಾರಿಸಿದ ನೇಮರ್ ಬಾರ್ಸಿಲೋನದ ಮುನ್ನಡೆಯನ್ನು 2-0ಗೆ ಏರಿಸಿದರು. ದೀರ್ಘ ಸಮಯದಿಂದ ಕಾಡುತ್ತಿದ್ದ ಗೋಲಿನ ಬರವನ್ನು ನೀಗಿಸಿಕೊಂಡರು. ಆದರೆ, ದ್ವಿತೀಯಾರ್ಧದ 51ನೆ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಬಾರಿಸಿದ ಎನ್ರಿಕ್ ಸಬೊರ್ಟಿಸ್ ಬಾರ್ಸಿಲೋನಕ್ಕೆ ತಿರುಗೇಟು ನೀಡಿದರು.
ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಗುವ ಹಂತದಲ್ಲಿದ್ದಾಗ 76ನೆ ನಿಮಿಷದಲ್ಲಿ ಫ್ರಿ-ಕಿಕ್‌ನಲ್ಲಿ ಗೋಲು ಬಾರಿಸಿದ ಮೆಸ್ಸಿ ತಂಡಕ್ಕೆ 3-1 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು. ಮೆಸ್ಸಿ 3ನೆ ಪಂದ್ಯದಲ್ಲಿ ಮೂರನೆ ಫ್ರೀಕಿಕ್ ಬಾರಿಸಿ ತಂಡಕ್ಕೆ ನೆರವಾದರು.







