23ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ಗೆ ಭರದ ಸಿದ್ಧತೆ
ಸಾಂಸ್ಕೃತಿಕ ಪ್ರಿಯರಿಗೆ ಮೂಡುಬಿದಿರೆಯಲ್ಲಿ ಇಂದಿನಿಂದ ರಸದೌತಣ

ಮೂಡುಬಿದಿರೆ,ಜ.12: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ರವರೆಗೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ ’ಆಳ್ವಾಸ್ ವಿರಾಸತ್ 2017’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
150 ಅಡಿ ಉದ್ದ 60 ಅಡಿ ಅಗಲದ ಬೃಹತ್ ವೇದಿಕೆಯು ಆಳ್ವಾಸ್ ಸಾಂಸ್ಕೃತಿಕ ಶೈಲಿಯಲ್ಲಿ ಸಜ್ಜುಗೊಳ್ಳುತ್ತಿದೆ. ವೇದಿಕೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕರದ ಪೂಕರೆ, ಎತ್ತಿನಗಾಡಿಯ ಚಕ್ರ, ಗುತ್ತಿನ ಮನೆಯ ಛಾವಣಿ ಮಾದರಿಯಲ್ಲಿ ರೂಪುಗೊಳ್ಳುತ್ತಿರುವ ಪ್ರವೇಶಧ್ವಾರಗಳ ನಡೆದಿವೆ. ಶ್ರೀಲಂಕಾದ ಸಂಪ್ರದಾಯಿಕ ಮುಖವಾಡವನ್ನು ಅಲಂಕಾರಕ್ಕೆ ಬಳಸುತ್ತಿರುವ ಈ ಬಾರಿಯ ವಿಶೇಷ. ವೇದಿಕೆಯ ಎದುರಿಗೆ 40,000 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇಂದು ಸಂಜೆ 5.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು 5.30ಕ್ಕೆ 23ನೇ ವರ್ಷದ ವಿರಾಸತ್‌ಗೆ ಚಾಲನೆ ನೀಡಲಿದ್ದಾರೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ/ ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಪ್ರಸಿದ್ಧ ಭರತನಾಟ್ಯ ಕಲಾವಿದ ಪದ್ಮಭೂಷಣ ವಿ.ಪಿ.ಧನಂಜಯನ್ ಅವರಿಗೆ ಈ ಬಾರಿಯ "ಆಳ್ವಾಸ್ ವಿರಾಸತ್ 2017"ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳನ್ ಕುಮಾರ್ ಕಟೀಲು, ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ರಾಜೇಂದ್ರ ಕುಮಾರ್ ಸಹಿತ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮೊದಲ ದಿನ ಮೊದಲ ಕಾರ್ಯಕ್ರಮವಾಗಿ "ಪ್ರಥಮ ಸಮ್ಮಿಲನ" ನಡೆಯಲಿದ್ದು ಶಶಾಂಕ್ ಸುಬ್ರಹ್ಮಣ್ಯಂ (ಕೊಳಲು), ಪ್ರವೀಣ್ ಗೋಡ್ಕಿಂಡಿ (ಬಾನ್ಸುರಿ), ವಿದ್ವಾನ್ ಭಕ್ತವತ್ಸಲಂ (ಮೃದಂಗ) ಹಾಗೂ ಪಂಡಿತ್ ಶುಭಶಂಕರ್ ಬ್ಯಾನರ್ಜಿ (ತಬ್ಲಾ) ಸಹಯೋಗದಲ್ಲಿ ಕೊಳಲು-ಬಾನ್ಸುರಿ ಜುಗಲ್‌ಬಂದಿ ನಡೆಯಲಿದೆ.
2ನೇ ಕಾರ್ಯಕ್ರಮವಾಗಿ ಭುವನೇಶ್ವರದ ಚಿತ್ರಸೇನ ಸ್ವೈನ್ ಅವರ ನಿರ್ದೇಶನದಲ್ಲಿ ಆಳ್ವಾಸ್‌ನ 55 ವಿದ್ಯಾರ್ಥಿ ಕಲಾವಿದರಿಂದ ಒರಿಸ್ಸಾದ ಗೋಟಿಪೂವಾ ನೃತ್ಯದೊಂದಿಗೆ ನೃತ್ಯ ವೈವಿಧ್ಯ, ಬೆಂಗಳೂರಿನ ಹರಿ ಮತ್ತು ಚೇತನಾ ನಿರ್ದೇಶನದಲ್ಲಿ 50 ವಿದ್ಯಾರ್ಥಿ ಕಲಾವಿದರಿಂದ ನಿಯೋ ಕಥಕ್ ನೃತ್ಯ : ಸಂಭ್ರಮ, ಗುಜರಾತ್‌ನ ಪೃಥ್ವಿ ಶಾ ನಿರ್ದೇಶನದಲ್ಲಿ 40 ವಿದ್ಯಾರ್ಥಿ ಕಲಾವಿದರಿಂದ ಗುಜರಾತಿನ ಹುಡೋ ರಾಸ್, ಬೆಂಗಳೂರಿನ ಮಂಟಪ ಪ್ರಭಾಕರ ಉಪಾಧ್ಯ ನಿದೇರ್ಶನದಲ್ಲಿ 35 ವಿದ್ಯಾರ್ಥಿ ಕಲಾವಿದರಿಂದ ಬಡಗು ಯಕ್ಷಗಾನ : ಮಧುಮಾಸದ ರೂಪಕ ನಂತರ ಕೇರಳದ 30 ಮುಸಲ್ಮಾನ ವಿದ್ಯಾರ್ಥಿ ಕಲಾವಿದರಿಂದ ಕೇರಳದ ಅರ್ಬನಮುಟ್ಟು ಕಾರ್ಯಕ್ರಮಗಳು ರಸದೌತಣ ನೀಡಲಿದೆ.







