ಕೇರಳ ಚಾಂಪಿಯನ್; ಕರ್ನಾಟಕ ರನ್ನರ್‌ಅಪ್
ಪಪೂ ಕಾಲೇಜು ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ

ಬೆಳ್ತಂಗಡಿ, ಜ.12: ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಬಾಲಕಿಯರ 19ರ ವಯೋಮಾನದ ವಾಲಿಬಾಲ್ ಪಂದ್ಯಾಟದಲ್ಲಿ ಕೇರಳ ತಂಡ ಅತಿಥೇಯ ಕರ್ನಾಟಕ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಫೈನಲ್ ಪಂದ್ಯಾಟದಲ್ಲಿ ಕೇರಳ ತಂಡ (25-18, 25-23, 25-21)ನೇರ ಸೆಟ್‌ಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡರು. ವಿಜೇತ ತಂಡದ ಪರವಾಗಿ ನಾಯಕಿ ಅನ್ನಾ ಮ್ಯಾಥ್ಯೂ ಹಾಗೂ ವರ್ಣಾ ಉತ್ತಮ ಹೊಡೆತಗಳ ಮೂಲಕ ಗಮನ ಸೆಳೆದರೆ, ಗ್ಲಾಡಿಯಸ್ ಅವರು ನಿರ್ಮಿಸಿದ ತಡೆಗೋಡೆ ಸದಾ ಕರ್ನಾಟಕವನ್ನು ಕಾಡಿತ್ತು. ಕರ್ನಾಟಕದ ಪರವಾಗಿ ಮೇಘನಾ ಅವರು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದರು. ನಾಯಕಿ ಯಶೋಧಾ ಶಾಲಿ ಹಾಗೂ ಇತರರು ಬೆಂಬಲ ನೀಡಿದರೂ ಕೇರಳ ತಂಡದ ಎದುರು ಸಾಕಾಗಲಿಲ್ಲ. ಮೂರು ಹಾಗೂ ನಾಲ್ಕನೆ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಉತ್ತರಪ್ರದೇಶ ತಂಡ ಪಶ್ಚಿಮ ಬಂಗಾಳ ತಂಡವನ್ನು 3-1 ಅಂತರದಲ್ಲಿ (25-19, 18-25, 25-22, 25-15) ಗೆಲುವನ್ನು ತನ್ನದಾಗಿಸಿಕೊಂಡರು. ಗುರುವಾರ ಬೆಳಗ್ಗೆ ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಕೇರಳ ತಂಡ ಉತ್ತರಪ್ರದೇಶ ತಂಡವನ್ನು (25-15,25-10,25-19) ಅಂಕಗಳೊಂದಿಗೆ ನೇರ ಸೆಟ್‌ಗಳಲ್ಲಿ ಮಣಿಸಿ ಅಂತಿಮ ಹಣಾಹಣಿಗೆ ಅರ್ಹತೆಯನ್ನು ಪಡೆದುಕೊಂಡಿತ್ತು. ಬಲವಾದ ಹೊಡೆತಗಳೊಂದಿಗೆ ಉತ್ತಮ ಆಟ ಪ್ರದರ್ಶಿಸಿದ ಕೇರಳ ತಂಡದ ಎದುರು ಯಾವುದೇ ಪ್ರತಿರೋಧ ವ್ಯಕ್ತಪಡಿಸಲು ಉತ್ತರಪ್ರದೇಶ ತಂಡಕ್ಕೆ ಸಾಧ್ಯವಾಗಲಿಲ್ಲ. ಎರಡನೆಯ ಸೆಮಿಫೈನಲ್ ಪಂದ್ಯಾಟದಲ್ಲಿ ಅತಿಥೆೇಯ ಕರ್ನಾಟಕ ತಂಡ ಪಶ್ಚಿಮ ಬಂಗಾಳ ತಂಡವನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದೆ(25-12, 25-18, 25-23) ಸಹಸ್ರಾರು ಬೆಂಬಲಿಗರ ಚಪ್ಪಾಳೆಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯ ತಂಡ ಯಾವ ಹಂತದಲ್ಲಿಯೂ ಪಶ್ಚಿಮ ಬಂಗಾಳ ತಂಡಕ್ಕೆ ಅವಕಾಶವನ್ನೇ ನೀಡಲಿಲ್ಲ.
**ದೇಬಶೀಶ್ ಬೆಹ್ವಾನ್ ಪಶ್ಚಿಮ ಬಂಗಾಳ ‘ಲಿಬ್ರೊ’, ಸರ್ವಾಂಗೀಣ ಆಟಗಾರ್ತಿಯಾಗಿ ಅಭಿರಾಮಿ ಕೇರಳ, ಸೆಟ್ಟರ್ ಆಗಿ ಯೀಶೋಧಾ ಕರ್ನಾಟಕ, ಅಟ್ಯಾಕರ್ ಅನ್ನಾ ಮ್ಯಾಥ್ಯೂ ಕೇರಳ ವೈಯಕ್ತಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.





