ಬಂಟ್ವಾಳ : ಕೃಷಿ ಉತ್ಸವಕ್ಕೆ ಸಂಭ್ರಮದ ತೆರೆ

ಬಂಟ್ವಾಳ, ಜ. 12: ಬಿ.ಸಿ.ರೋಡಿನ ಗಾನದಪಡ್ಪು ಮೈದಾನದಲ್ಲಿ ಎರಡು ದಿನಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಕೃಷಿ ಉತ್ಸವಕ್ಕೆ ಗುರುವಾರ ಸಂಜೆ ಸಂಭ್ರಮದ ತೆರೆ ಬಿದ್ದಿದೆ.
ಬುಧವಾರ ಬೆಳಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆಗೊಂಡಿದ್ದ ಕೃಷಿ ಉತ್ಸವದಲ್ಲಿ ಎರಡು ದಿನಗಳ ಕಾಲ ಕೃಷಿಕರಿಗೆ ಸಂಬಂಧಿಸಿದ ಒಟ್ಟು ಐದು ವಿಚಾರ ಗೋಷ್ಠಿಗಳು ನಡೆದಿದ್ದು ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಿತು. ಪ್ರಮುಖವಾಗಿ ಜೀವ ಜಲ ಸಂರಕ್ಷಣೆ, ಭತ್ತ ಬೇಸಾಯದಲ್ಲಿ ಯಾಂತ್ರೀಕತೆ, ವ್ಯಸನ ಮುಕ್ತ ಕುಟುಂಬ, ಸಮಗ್ರ ತೋಟಗಾರಿಕಾ ಬೆಳೆಗಳು ಹಾಗೂ ಲಾಭದಾಯಕ ಹೈನೋಧ್ಯಮದ ಕುರಿತು ವಿಚಾರ ಗೋಷ್ಠಿಗಳು ನಡೆಯಿತು. ಹಾಗೆಯೇ ಸಂಜೆಯ ವೇಳೆಗೆ ಎರಡು ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ಮೇಳೈಸಿತು. ಈ ಕೃಷಿ ಉತ್ಸವದಲ್ಲಿ ಸುಮಾರು 110 ವಿವಿಧ ಮಳಿಗೆಗಳಿದ್ದು ಕೃಷಿ ಸಂಬಂಧಿತ ಯಂತ್ರೋಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟ ಹಾಗೂ ಕೈಪಿಡಿಗಳ, ಕೃಷಿಗೆ ಸಂಬಂಧಿಸಿ ಪುರಾತನ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಗುರುವಾರ ಸಂಜೆ ಕೃಷಿ ಉತ್ಸವ ಸಮಿತಿಯ ಅಧ್ಯಕ್ಷ ರೊನಾಲ್ಡ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಎಚ್.ಮಂಜುನಾಥ್ ಅವರು ಸಮಾರೋಪ ಭಾಷಣಗೈದು, ಎರಡು ದಿನಗಳ ಈ ಕೃಷಿ ಉತ್ಸವವು ಜಿಲ್ಲೆಯಲ್ಲೇ ಗಮನ ಸೆಳೆಯುವ ಮೂಲಕ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಕೃಷಿಕರು ಹಿಂದಿನ ಪರಂಪರೆಯ ಜೊತೆಗೆ ಆಧುನಿಕತೆಯನ್ನು ಬೆಸೆದಾಗ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯವಾಗುದು ಎಂದ ಅವರು, ಮಕ್ಕಳಿಗೆ ಎಳೆ ಪ್ರಾಯದಲ್ಲೇ ಹೆತ್ತವರು ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕು. ತನ್ಮೂಲಕ ಕೃಷಿಯನ್ನು ಉಳಿಸುವ ಕಾರ್ಯವಾಗಬೇಕು ಎಂದರು.
ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ತಹಶೀಲ್ದಾರ್ ಪುರದಂರ ಹೆಗ್ಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿಕರಿಗೆ ಕೃಷಿ ಕುರಿತಾದ ತರಬೇತಿಯನ್ನು ನೀಡುವುದರ ಜೊತೆಗೆ ಸ್ವಾಭಿಮಾನಿ ಜೀವನ ನಡೆಸುವಂತೆ ಮಾಡಿದೆ ಎಂದರು. ಜಿಲ್ಲೆಯ ಜನಪ್ರತಿನಿಧಿಗಳ ಬದ್ಧತೆಯಿಂದಾಗಿ ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಮುಂಚೂಣಿಯತ್ತ ಸಾಗುತ್ತಿದೆ. ಸರಕಾರವೇ ಜನರ ಬಳಿಗೆ ಬಂದು ವಿವಿಧ ಇಲಾಖೆಯ ಮಾಹಿತಿಯನ್ನು ನೀಡುವುದರೊಂದಿಗೆ ಸೌಲಭ್ಯವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಡೆಸುತ್ತಿದೆ ಎಂದರು.
ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ್, ಉದ್ಯಮಿ ಸೇಸಪ್ಪ ಕೋಟ್ಯಾನ್, ನರಿಕೊಂಬು ಸತ್ಯಶ್ರೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಸಪಲ್ಯ, ತಾಲೂಕುಪ್ರಾ.ಬಂ.ಸ್ವ.ಸ.ಸಂ.ಕೆ.ಒಕ್ಕೂಟದ ಅಧ್ಯಕ್ಷ ಸದಾನಂದ ಗೌಡ, ತಾಲೂಕು ಯೋಜನಾಧಿಕಾರಿ ಸುನಿತಾ ನಾಯ್ಕಾ ಉಪಸ್ಥಿತರಿದ್ದರು.







