ರಾಷ್ಟ್ರಗೀತೆಗೆ ಎದ್ದು ನಿಂತಿಲ್ಲ ಎಂದು ವೃದ್ಧೆಯ ಅವಹೇಳನ
ಚೆನ್ನೈ, ಜ.12: ರಾಷ್ಟ್ರಗೀತೆ ನುಡಿಸುವಾಗ ಎದ್ದು ನಿಂತಿಲ್ಲ ಎಂಬ ಕಾರಣಕ್ಕಾಗಿ ಮಹಿಳೆ ಮತ್ತಾಕೆಯ ವೃದ್ಧ ತಾಯಿಯನ್ನು ಅವಹೇಳನಗೈದ ಹಾಗೂ ವ್ಯಕ್ತಿಯೊಬ್ಬನಿಗೆ ಥಳಿಸಿದ ಘಟನೆ ವಡಪಳನಿಯ ಪಲರೆ ಸಿನೆಮಾಸ್‌ನಿಂದ ವರದಿಯಾಗಿದೆ. ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿದ್ದ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ.
ಈ ಘಟನೆಯ ಪ್ರತ್ಯಕ್ಷ ಸಾಕ್ಷಿಯೊಬ್ಬರ ಪ್ರಕಾರ ರಾಷ್ಟ್ರಗೀತೆ ನುಡಿಸುತ್ತಿದ್ದಾಗ ಈ ಮೂವರೂ ನಿಂತಿಲ್ಲದ್ದನ್ನು ಕಂಡು ಹಿಂದಿನ ಸೀಟಿನಲ್ಲಿದ್ದವರು ಅವರನ್ನು ಪ್ರಶ್ನಿಸಿದ್ದರು. ಕೂಡಲೇ ಹಲವಾರು ಮಂದಿ ಇವರೊಂದಿಗೆ ಸೇರಿಕೊಂಡರು. ಮಹಿಳೆಯರು ತಮ್ಮನ್ನು ಸಮರ್ಥಿಸಿಕೊಳ್ಳಲೆತ್ನಿಸಿದ್ದು ಇತರರಿಗೆ ಸರಿ ಕಂಡಿರಲಿಲ್ಲ. ಪುರುಷನೊಬ್ಬನಿಗೆ ಕೆಲವರು ಚೆನ್ನಾಗಿ ತದಕಿದ್ದರು. ಪೊಲೀಸರು ಸ್ಥಳಕ್ಕೆ ಬರುವ ತನಕ ಚಿತ್ರ ಪ್ರದರ್ಶನ ನಡೆಯಬಾರದೆಂದು ಅಲ್ಲಿದ್ದವರು ಬೇಡಿಕೆ ಕೂಡಾ ಇಟ್ಟರು.
ಘಟನೆ ನಡೆದು ಸುಮಾರು ಅರ್ಧ ಗಂಟೆ ತರುವಾಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಮಹಿಳೆಯರು ಮತ್ತೊಬ್ಬ ಪುರುಷನನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡರು. ಆದರೆ ಈ ಮೂವರನ್ನು ನಿಂದಿಸಿ ಅವರಲ್ಲೊಬ್ಬರಿಗೆ ಹಲ್ಲೆ ನಡೆಸಿದವರನ್ನೂ ಬಂಧಿಸಬೇಕೆಂದು ಚಿತ್ರೋತ್ಸವದ ಸಂಘಟಕರು ಆಗ್ರಹಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಶ್ರೀಲಾ, ಆಕೆಯ ತಾಯಿ ಶುಭಶ್ರೀ ಮತ್ತು ಕೇರಳದಿಂದ ಬಂದ ಪ್ರತಿನಿಧಿ ಬಿಜಾನ್ ರಾಷ್ಟ್ರಗೀತೆ ನುಡಿಸುವ ಸಂದರ್ಭ ನಿಲ್ಲದೇ ಸಮಸ್ಯೆಯೆದುರಿಸಿದವರು. ಶ್ರೀಲಾ ಮೇಲೆ ಈ ಹಿಂದೆ ಕೂಡ ಇಂತಹುದೇ ಘಟನೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.





