600 ಕೋಟಿ ರೂ. ಪಾವತಿಸದಿದ್ದರೆ ಜೈಲಿಗೆ
ಸುಬ್ರತಾ ರಾಯ್‌ಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಜ.12: ನಿಗದಿತ ಅವಧಿಯೊಳಗೆ 600 ಕೋಟಿ ರೂ.ಯನ್ನು ಪಾವತಿಸದಿದ್ದರೆ ಜೈಲುವಾಸ ಅನಿವಾರ್ಯ ಎಂದು ಸಹಾರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಸುಬ್ರತಾ ರಾಯ್‌ಗೆ ಸುಪ್ರೀಂಕೋರ್ಟ್ ತಿಳಿಸಿದೆ. 600 ಕೋಟಿ ರೂ.ಯನ್ನು ಫೆಬ್ರವರಿ 6ರ ಒಳಗೆ ಸೆಬಿ ಖಾತೆಗೆ ಜಮೆ ಮಾಡುವಂತೆ ಸುಪ್ರೀಂಕೋರ್ಟ್ ಈ ಹಿಂದೆ ತಿಳಿಸಿತ್ತು. ಆದರೆ ನೋಟು ಅಮಾನ್ಯ ಪ್ರಕ್ರಿಯೆ ಮತ್ತು ಇದರಿಂದ ಉಂಟಾಗಿರುವ ಆರ್ಥಿಕ ಹಿಂಜರಿತದ ಕಾರಣ ತನಗೆ ಮತ್ತಷ್ಟು ಕಾಲಾವಕಾಶ ಬೇಕೆಂದು ಕೋರಿ ರಾಯ್ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಇದನ್ನು ನಿರಾಕರಿಸಿರುವ ಸುಪ್ರೀಂಕೋರ್ಟ್, ಈಗಾಗಲೇ ಸಾಕಷ್ಟು ಅವಧಿ ನೀಡಲಾಗಿದೆ. ಇನ್ನು ಹೆಚ್ಚುವರಿ ಅವಧಿ ಸಾಧ್ಯವಿಲ್ಲ. ನಿಗದಿತ ಅವಧಿಯೊಳಗೆ 600 ಕೋಟಿ ರೂ. ಜಮೆ ಮಾಡದಿದ್ದರೆ ಜೈಲುವಾಸಕ್ಕೆ ಸಿದ್ಧವಾಗುವಂತೆ ತಿಳಿಸಿದೆ. ಅದಾಗ್ಯೂ, ಲಂಡನ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ 285 ಕೋಟಿ ರೂ.ಯನ್ನು ಸೆಬಿಗೆ ವರ್ಗಾಯಿಸಲು ರಾಯ್‌ಗೆ ಅನುಮತಿ ನೀಡಿದೆ.
Next Story





