ಮಾಹಿತಿ ಆಯುಕ್ತರಿಂದ ಎಚ್‌ಆರ್‌ಡಿ ಜವಾಬ್ದಾರಿಯನ್ನೇ ಕಿತ್ತುಕೊಂಡ ಸಿಐಸಿ
ಮೋದಿ ಪದವಿ ವಿವಾದ
ಹೊಸದಿಲ್ಲಿ, ಜ.12: ದಿಲ್ಲಿ ವಿಶ್ವವಿದ್ಯಾನಿಲಯದ 1978ರ ಬಿಎ ಪದವಿ ದಾಖಲೆಗಳ ತಪಾಸಣೆಗೆ ಮತ್ತು ಅದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂಬ ಆದೇಶ ಹೊರಡಿಸಿದ ಎರಡೇ ದಿನಗಳಲ್ಲಿ ಮಾಹಿತಿ ಆಯುಕ್ತ ಎಂ.ಎಸ್.ಆಚಾರ್ಯಲು ಅವರಿಂದ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್ ಅವರು, ಮಾನವ ಸಂಪನ್ಮೂಲ ಅಭಿವೃದ್ಧಿ ಜವಾಬ್ದಾರಿಯನ್ನು ಕಿತ್ತುಕೊಂಡಿದ್ದಾರೆ.
ಮಂಗಳವಾರ ಈ ಕುರಿತ ಆದೇಶ ಹೊರಡಿಸಲಾಗಿದೆ. ಎಚ್‌ಆರ್‌ಡಿ ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲ ದೂರು ಹಾಗೂ ಮೇಲ್ಮನವಿಗಳನ್ನು ಮಾಹಿತಿ ಆಯುಕ್ತ ಮಂಜುಳಾ ಪರಾಶರ್ ನೋಡಿಕೊಳ್ಳುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಯಾವುದೇ ಆಯುಕ್ತರಿಗೆ ವಿಷಯಗಳ ಹಂಚಿಕೆ ಮುಖ್ಯ ಮಾಹಿತಿ ಆಯುಕ್ತರ ಅಧಿಕಾರವಾಗಿದ್ದು, ಡಿಸೆಂಬರ್ 29ರಂದು ನೀಡಿದ ಆದೇಶದಲ್ಲಿ ಆಚಾರ್ಯಲು ಅವರಲ್ಲೇ ಎಚ್‌ಆರ್‌ಡಿ ಸಚಿವಾಲಯವನ್ನು ಉಳಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅದನ್ನು ಬೇರೆಯವರಿಗೆ ವರ್ಗಾಯಿಸುವ ಆದೇಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ನರೇಂದ್ರ ಮೋದಿಯವರು ದಿಲ್ಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ ಎನ್ನಲಾದ 1978ರ ಪದವಿ ದಾಖಲೆಗಳನ್ನು ತಪಾಸಣೆ ಮಾಡಲು ಡಿಸೆಂಬರ್ 21ರಂದು ಆಚಾರ್ಯಲು ಆದೇಶ ನೀಡಿದ್ದರು.
ಹೊಸ ಆದೇಶದ ಬಗ್ಗೆ ದೂರವಾಣಿ ಕರೆ ಅಥವಾ ಲಿಖಿತ ಮೆಸೇಜ್‌ಗಳಿಗೆ ಮಾಥುರ್ ಸ್ಪಂದಿಸಿಲ್ಲ. ಆಚಾರ್ಯಲು ಅವರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕಳೆದ ವರ್ಷ ವಿಶ್ವವಿದ್ಯಾನಿಲಯ, ಮೋದಿ ಪದವಿ ಬಗೆಗಿನ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿತ್ತು.





