ಲಾರಿ ಢಿಕ್ಕಿ: ಬಾಲಕಿ ಮೃತ್ಯು
ಪುತ್ತೂರು ಜ.12: ರಿಕ್ಷಾದಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯೊಬ್ಬಳಿಗೆ ಈಚರ್ ಲಾರಿಯೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ಪುತ್ತೂರು ಕಾಣಿಯೂರು ರಸ್ತೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ನರಿಮೊಗ್ರು ಗ್ರಾಮದ ಪಾಪೆತ್ತಡ್ಕ ನಿವಾಸಿ ಅಬೂಬಕರ್ ಸಿದ್ದೀಕ್ ಎಂಬವರ ಪುತ್ರಿ, ನರಿಮೊಗ್ರು ಸರಕಾರಿ ಹಿ.ಪ್ರಾ. ಶಾಲೆಯ ಮೂರನೆ ತರಗತಿಯ ವಿದ್ಯಾರ್ಥಿನಿ ಆಯಿಷತ್ ಸಾ(9) ಮೃತಪಟ್ಟ ವಿದ್ಯಾರ್ಥಿನಿ. ಗುರುವಾರ ಸಂಜೆ ಶಾಲೆ ಬಿಟ್ಟು ರಿಕ್ಷಾದಲ್ಲಿ ಮನೆಗೆ ತೆರಳಿದ್ದ ಆಯಿಷತ್ ಸಾ, ರಿಕ್ಷಾದಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಣಿಯೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಈಚರ್ ಲಾರಿಯೊಂದು ಢಿಕ್ಕಿ ಹೊಡೆದು ಲಾರಿಯ ಚಕ್ರ ಬಾಲಕಿಯ ದೇಹದ ಮೇಲೆಯೇ ಚಲಿಸಿತ್ತು ಎನ್ನಲಾಗಿದೆ. ಪರಿಣಾಮ ಗಂಭೀರ ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸ್ಥಳೀಯರು ರಿಕ್ಷಾವೊಂದರಲ್ಲಿ ಪುತ್ತೂರಿಗೆ ಕರೆದೊಯ್ಯುತ್ತಿದ್ದ ವೇಳೆ ರಿಕ್ಷಾದ ಪೆಟ್ರೋಲ್ ಖಾಲಿಯಾಗಿ ನಡುದಾರಿಯಲ್ಲೇ ರಿಕ್ಷಾ ಬಾಕಿಯಾಯಿತು. ಬಳಿಕ ಸ್ಥಳೀಯರಾದ ಅರುಣ್‌ಕುಮಾರ್ ಪುತ್ತಿಲ ತನ್ನ ಜೀಪಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಬಾಲಕಿ ಮೃತಪಟ್ಟಿದ್ದಾರೆ.
ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





