ಅರ್ನಬ್ ಗೋಸ್ವಾಮಿ ರಿಪಬ್ಲಿಕ್‌ನಲ್ಲಿ ಬಂಡವಾಳ ಹೂಡಿದವರಲ್ಲಿ ಎನ್‌ಡಿಎ ಸಂಸದ, ಮಣಿಪಾಲದ ಪೈ!

ಹೊಸದಿಲ್ಲಿ, ಜ.13: ರಾಜ್ಯಸಭಾ ಸದಸ್ಯ ಹಾಗೂ ಕೇರಳ ಎನ್‌ಡಿಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು, ಅರ್ನಬ್ ಗೋಸ್ವಾಮಿ ಅವರ ಹೊಸ ಮಾಧ್ಯಮ ಸಂಸ್ಥೆಯಲ್ಲಿ ಬಂಡವಾಳ ಹೂಡಿದವರಲ್ಲಿ ಅಗ್ರಗಣ್ಯರು. ಹೂಡಿಕೆದಾರರಲ್ಲಿ ಆರಿನ್ ಕ್ಯಾಪಿಟಲ್ ಪಾಲುದಾರ ರಂಜನ್ ರಾಮದಾಸ್ ಪೈ 7.5 ಕೋಟಿ ಹೂಡಿಕೆ ಮಾಡಿದ್ದಾರೆ.
ರಿಪಬ್ಲಿಕ್ ಹೆಸರಿನ ಈ ಸುದ್ದಿ ಚಾನೆಲ್ ನವೆಂಬರ್ ಕೊನೆಗೆ ಅಪ್‌ಲಿಂಕ್ ಹಾಗೂ ಡೌನ್‌ಲೋಡಿಂಗ್ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದೆ.
ರಿಪಬ್ಲಿಕ್, ಎಆರ್‌ಸಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಅಂಗ ಸಂಸ್ಥೆಯಾಗಿದೆ. ಟೈಮ್ಸ್ ನೌ ಎಡಿಟರ್ ಇನ್ ಚೀಫ್ ಹುದ್ದೆಗೆ ರಾಜೀನಾಮೆ ನೀಡಿದ ಮರುದಿನ ಅಂದರೆ ನವೆಂಬರ್ 19ರಂದು ಕಂಪೆನಿಯ ಆಡಳಿತ ನಿರ್ದೇಶಕರಾಗಿ ಗೋಸ್ವಾಮಿ ನೇಮಕಗೊಂಡಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ತಮ್ಮ ಕಂಪೆನಿಯ ಮೂಲಕ 30 ಕೋಟಿ ರೂಪಾಯಿಗಳನ್ನು ಇದರಲ್ಲಿ ಹೂಡಿದ್ದಾರೆ.
ಎಸ್‌ಎಆರ್‌ಜಿ ಮೀಡಿಯಾ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ರಾಜೀವ್ ಚಂದ್ರಶೇಖರ್ ಅವರ ಏಷ್ಯಾನೆಟ್ ನ್ಯೂಸ್ ಆನ್‌ಲೈನ್ ಪ್ರೈವೇಟ್ ಲಿಮಿಟೆಡ್ ಮುಖ್ಯ ಹೂಡಿಕೆದಾರರು. ಇದಕ್ಕೆ ಗೋಸ್ವಾಮಿ ಹಾಗೂ ಅವರ ಪತ್ನಿ ಸಮ್ಯಬ್ರತ ರಾಯ್ ಗೋಸ್ವಾಮಿ ನಿರ್ದೇಶಕರು. ಬಹುತೇಕ ಈಕ್ವಿಟಿ ಇವರ ಹೆಸರಿನಲ್ಲಿದೆ. ಇತರ 14 ಮಂದಿ ಇದರಲ್ಲಿ ಹೂಡಿಕೆ ಮಾಡಿದ್ದು, ನವೆಂಬರ್ 16ರಂದು ನೋಂದಣಿಯಾಗಿದೆ.
ಉಳಿದ ಹೂಡಿಕೆದಾರರಲ್ಲಿ ರಮಾಕಾಂತ ಪಾಂಡ, ಹೇಮೇಂದ್ರ ಕೊಠಾರಿ, ಎನ್.ನರೇಶ್ ಹಾಗೂ ಟಿವಿಎಸ್‌ನ ಶೋಭನಾ ರಾಮಚಂದ್ರನ್ ಸೇರಿದ್ದಾರೆ. ಡಿಇಎನ್ ನೆಟ್‌ವರ್ಕ್‌ನ ಸಮೀರ್ ಮಂಚಂಡಾ ಹಾಗೂ ಇತರ ಇಬ್ಬರೂ ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಈಗಾಗಲೇ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭದ ಮಾಲಕರು.







