ಬಿಜೆಪಿ ಗೆದ್ದರೆ ಪಾರಿಕ್ಕರ್ ಗೋವಾ ಸಿಎಂ?

ಹೊಸದಿಲ್ಲಿ/ ಪಣಜಿ, ಜ.13: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮತ್ತೆ ರಾಜ್ಯ ರಾಜಕೀಯಕ್ಕೆ ಧುಮುಕಿ ಮುಖ್ಯಮಂತ್ರಿಯಾಗುತ್ತಾರೆಯೇ? ಎಂಬ ಕುತೂಹಲ ಹುಟ್ಟಿಕೊಂಡಿದೆ.
ಗೋವಾ ಸಿಎಂ ಅಭ್ಯರ್ಥಿಯನ್ನು ಘೋಷಿಸದೇ ಚುನಾವಣೆ ಎದುರಿಸಲು ಪಕ್ಷ ನಿರ್ಧರಿಸಿದ್ದು, ಇದೀಗ 17 ಮಂದಿ ಹಾಲಿ ಶಾಸಕರು ಸೇರಿದಂತೆ 29 ಸ್ಥಾನಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಬಳಿಕ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಹಾಲಿ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಹೆಸರೂ ಸೇರಿದೆ.
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಮುಂದಿನ ಗೋವಾ ಸಿಎಂ ಎಂಬ ಸುಳಿವನ್ನು ಕೇಂದ್ರ ಸಚಿವ ಹಾಗೂ ಗೋವಾ ಚುನಾವಣೆಯ ಉಸ್ತುವಾರಿ ಹೊಂದಿರುವ ನಿತಿನ್ ಗಡ್ಕರಿ ನೀಡಿದ್ದಾರೆ. ಗೋವಾದಲ್ಲಿ ಬಹುಮತ ಸಾಧಿಸಿ, ಶಾಸಕರು ನಿರ್ಧರಿಸಿದರೆ ದಿಲ್ಲಿಯಲ್ಲಿರುವ ಒಬ್ಬ ನಾಯಕರು ಸಿಎಂ ಆಗಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಬಗ್ಗೆ ಮೋದಿ ಜತೆ ಚರ್ಚಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ. "ನಮ್ಮ ಹೊಸ ಶಾಸಕರು ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ನಾವು ಕೇಂದ್ರದಿಂದಲೂ ನಾಯಕರನ್ನು ಕಳುಹಿಸಬಹುದು" ಎಂದು ಗಡ್ಕರಿ ಹೇಳಿದ್ದಾರೆ.







