ಅಸಭ್ಯ ಪದಗಳನ್ನು ವಿರೋಧಿಸಿದ್ದಕ್ಕೆ ಬಾಲಕಿಯ ಸಜೀವ ದಹನ
ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ ಬಾಲಕ

ಭವಾನಿಪಟ್ಣ, ಜ.13: ಅಸಭ್ಯ ಪದಗಳನ್ನು ವಿರೋಧಿಸಿದ್ದಕ್ಕೆ ಬಾಲಕಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನ ಯುವಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಭವಾನಿಪಟ್ಣದಿಂದ 24 ಕಿಲೋಮೀಟರ್ ದೂರದ ಲಂಜಿಘರ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, 15 ವರ್ಷದ ಬಾಲಕಿ, ಯುವಕರ ಅಸಭ್ಯ ಪದ ಬಳಕೆಗೆ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಆಕೆಗೆ ಬೆಂಕಿ ಹಚ್ಚಿದರು ಎಂದು ಪೊಲೀಸರು ಹೇಳಿದ್ದಾರೆ. ಶೇಕಡ 80 ಸುಟ್ಟಗಾಯಗಳಾಗಿರುವ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.
ಮಧುಪುರದ ತಪಸ್ವಿನಿ ರಾಣಾ ಎಂಬ ಹತ್ತನೇ ತರಗತಿ ವಿದ್ಯಾರ್ಥಿನಿ ಬುಧವಾರ ಸಂಜೆ ಶಾಲೆಯಿಂದ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಬುಲು ದಾಸ್ (19) ಹಾಗೂ 17 ವರ್ಷದ ಮತ್ತೊಬ್ಬ ಯುವಕ, ಆಕೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದರು ಎಂದು ಗಾಯಾಳು ಬಾಲಕಿ ಹೇಳಿಕೆಯಲ್ಲಿ ವಿವರಿಸಿದ್ದಾಳೆ. ಈ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಗ್ಯಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬುರ್ಲ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ.
Next Story





