ಪಾಕಿಸ್ತಾನದ ಪರೋಟ-ಮೇಕರ್ ಈಗ ಎನ್‌ಸಿಎ ಕ್ರಿಕೆಟ್ ತಂಡಕ್ಕೆ ಆಯ್ಕೆ

ಕರಾಚಿ, ಜ.13: ಕರಾಚಿಯ ರೆಸ್ಟೋರೆಂಟ್‌ನಲ್ಲಿ ಪರೋಟಾ ತಯಾರಕನಾಗಿ ಕೆಲಸ ಮಾಡುತ್ತಿರುವ ಹನಾನ್ ಖಾನ್ ಪಾಕಿಸ್ತಾನದ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಇಲೆವೆನ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಜ.14 ರಿಂದ ಲಾಹೋರ್‌ನ ಗಧಾಫಿ ಸ್ಟೇಡಿಯಂನಲ್ಲಿ ಮಲೇಷ್ಯಾ ಹಾಗೂ ಎನ್‌ಸಿಎ ಇಲೆವೆನ್ ನಡುವೆ ಎರಡು ಟ್ವೆಂಟಿ-20 ಪಂದ್ಯಗಳು ನಡೆಯಲಿದ್ದು, ಈ ಪಂದ್ಯದಲ್ಲಿ ಖಾನ್ ಆಯ್ಕೆಯಾಗಿದ್ದಾರೆ ಎಂದು ಡಾನ್‌ಡಾಟ್ ಕಾಮ್ ವರದಿ ಮಾಡಿದೆ.
‘‘ನನಗೆ ಈ ಅವಕಾಶ ಲಭಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಲಾಹೋರ್‌ನಿಂದ ಮೊದಲ ದೂರವಾಣಿ ಕರೆ ಬಂದಾಗ ನಾನು ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದೆ. ನಂತರ ಮತ್ತೊಮ್ಮೆ ಕರೆ ಮಾಡಿ ನನ್ನ ಆಯ್ಕೆಯ ಬಗ್ಗೆ ಮಾಹಿತಿ ನೀಡಿದ್ದರು. ನನಗೆ ಮೊದಲಿಗೆ ನಂಬಿಕೆ ಬಾರದೇ ನಾನೇ ಖುದ್ದಾಗಿ ಕರೆ ಮಾಡಿ 2 ಟ್ವೆಂಟಿ-20 ಪಂದ್ಯಗಳಿಗೆ ಆಯ್ಕೆಯಾಗಿದ್ದನ್ನು ಖಚಿತಪಡಿಸಿಕೊಂಡಿದ್ದೆ ಎಂದು ಎಡಗೈ ಬ್ಯಾಟ್ಸ್‌ಮನ್ ಖಾನ್ ‘ಡಾನ್ ನ್ಯೂಸ್’ಗೆ ತಿಳಿಸಿದ್ದಾರೆ.
19ರ ಪ್ರಾಯದ ಖಾನ್ ದೇಶೀಯ ಗ್ರೇಡ್-2 ಪಂದ್ಯಗಳಲ್ಲಿ ಕ್ವೆಟ್ಟಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರತಿಭಾನ್ವೇಷಣೆಯಲ್ಲಿ ಪಾಕಿಸ್ತಾನದ ಸೂಪರ್ ಲೀಗ್‌ನ ಫ್ರಾಂಚೈಸಿ ಕ್ವೆಟ್ಟಾ ಗ್ಲಾಡಿಯೆಟರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.





