ಆಂಧ್ರದಲ್ಲಿ ಸಿನಿಮಾ ಅಭಿಮಾನಿಯೊಬ್ಬ ಎಷ್ಟು ಬೆಲೆಯ ಟಿಕೆಟ್ ಖರೀದಿಸಿದ್ದಾರೆ ಗೊತ್ತೇ?

ಹೈದರಾಬಾದ್, ಜ.13: ತೆಲುಗು ಚಿತ್ರರಂಗದ ಹಿರಿಯ ನಟ ಬಾಲಕೃಷ್ಣ ನಟನೆಯ 100ನೆ ಚಿತ್ರ ‘ಗೌತಮಿಪುತ್ರ ಶಾತಕರ್ಣಿ’ ಗುರುವಾರ ಬಿಡುಗಡೆಯಾಗಿದ್ದು, ಬಾಲಕೃಷ್ಣರ ಕಟ್ಟಾ ಅಭಿಮಾನಿಯೊಬ್ಬ 1 ಲಕ್ಷ ರೂ. ಪಾವತಿಸಿ ಸಿನಿಮಾ ಟಿಕೆಟ್‌ಗಳನ್ನು ಖರೀದಿಸಿ ಅಭಿಮಾನಿಗಳು, ತೆಲುಗು ಚಿತ್ರದ ಮೆಗಾಸ್ಟಾರ್‌ನ್ನು ಅಚ್ಚರಿಗೊಳಿಸಿದ್ದಾರೆ.
ಗುಂಟೂರಿನ ಮೊಡೆಸ್ಟ್ ರೆಸ್ಟೋರೆಂಟ್‌ನ ಮಾಲಕ, ಎಂಬಿಎ ಪದವೀಧರ ಗೋಪಿಚಂದ್(27ವರ್ಷ) ಸಿಟಿ ಸೆಂಟರ್‌ಗೆ ತೆರಳಿ ಕ್ಯಾನ್ಸರ್ ಪೀಡಿತರ ಸಹಾಯಾರ್ಥ ಏರ್ಪಡಿಸಿದ್ದ ಸಿನೆಮಾ ಪ್ರದರ್ಶನಕ್ಕೆ ತೆರಳಿದ್ದರು. ಆಯೋಜಕರು 500 ಹಾಗೂ 2000 ರೂ. ನಡುವಿನ ಟಿಕೆಟ್ ಮಾರಾಟವಾಗುವ ವಿಶ್ವಾಸದಲ್ಲಿದ್ದರು. ಆದರೆ, ಗೋಪಿಚಂದ್ 1 ಲಕ್ಷ ರೂ. ಚೆಕ್ ಪಾವತಿಸಿ ಟಿಕೆಟ್‌ನ್ನು ಪಡೆದರು.
ಗೋಪಿಚಂದ್ 1 ಲಕ್ಷ ರೂ. ಚೆಕ್ ನೀಡಿದಾಗ ನಾವು ಮೂಕವಿಸ್ಮಿತರಾಗಿದ್ದೆವು ಎಂದು ಚಿತ್ರ ಪ್ರದರ್ಶನದ ಆಯೋಜಕರು ತಿಳಿಸಿದ್ದಾರೆ.
‘‘ನಾನು ಕಳೆದ ಒಂದು ವರ್ಷದಿಂದ ಈ ಹಣವನ್ನು ಉಳಿಸಿದ್ದೆ. ಪಾರ್ಟಿಗಳಂತಹ ಅನಗತ್ಯ ವಿಷಯಕ್ಕೆ ಹಣ ಪೋಲು ಮಾಡಲು ಇಷ್ಟಪಡದೆ, ಚಾರಿಟಿಗಾಗಿ ಹಣ ಉಳಿಸುವ ಉದ್ದೇಶ ನನ್ನಲ್ಲಿತ್ತು. ಸಿನೆಮಾ ಬಿಡುಗಡೆಯನ್ನು ನಿರೀಕ್ಷಿಸುತ್ತಿದ್ದೆ. ಇದೀಗ ಕೂಡಿಟ್ಟ ಹಣವನ್ನು ಒಂದೊಳ್ಳೆಯ ಉದ್ದೇಶಕ್ಕೆ ನೀಡುತ್ತಿರುವ ತೃಪ್ತಿ ನನಗಿದೆ’’ ಎಂದು ಗೋಪಿಚಂದ್ ಹೇಳಿದ್ದಾರೆ.







