ಬೂತ್ ಮಟ್ಟದ ಮತಗಳ ವಿವರ ನೀಡದೆ ಇರುವ ಆಯೋಗದ ಪ್ರಸ್ತಾಪವನ್ನು ತಿರಸ್ಕರಿಸಿದ ಕೇಂದ್ರ
.jpg)
ಹೊಸದಿಲ್ಲಿ, ಜ.13: ಬೂತ್ ಮಟ್ಟದ ಮತಗಳ ವಿವರ ನೀಡದೆ ಹೆಚ್ಚಿನ ಗೌಪ್ಯತೆ ಕಾಪಾಡಲು ಮತ ಎಣಿಕೆಗೆ ಟೋಟಲೈಸರ್ ಮೆಶೀನುಗಳನ್ನುಉಪಯೋಗಿಸುವ ಕುರಿತು ಚುನಾವಣಾ ಆಯೋಗ ಮುಂದಿಟ್ಟ ಪ್ರಸ್ತಾಪವೊಂದನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ನವೆಂಬರ್ 18, 2016ರಂದು ಮುಖ್ಯ ಚುನಾವಣಾಧಿಕಾರಿ ನಾಸಿಮ್ ಝೈದಿಯವರಿಗೆ ಬರೆದ ಪತ್ರವೊಂದರಲ್ಲಿ ಈ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿ ಈ ಪ್ರಸ್ತಾಪವನ್ನು ಒಪ್ಪಲಿಲ್ಲ ಎಂದು ಅದರಲ್ಲಿ ಹೇಳಲಾಗಿದೆ.
ಈ ಮೆಶೀನುಗಳು 14 ಬೂತುಗಳಲ್ಲಿ ಚಲಾವಣೆಯಾದ ಮತಗಳನ್ನು ಒಟ್ಟಾಗಿ ಎಣಿಸುವುದರಿಂದ ಈಗಿನಂತೆ ಬೂತ್ ಮಟ್ಟದ ಮತಗಳ ವಿವರ ದೊರೆಯುವುದಿಲ್ಲ. ಬೂತ್ ಮಟ್ಟದ ಮತ ಎಣಿಕೆ ವಿವರಗಳು ದೊರೆತಲ್ಲಿ ಪಕ್ಷಗಳು ಹಾಗೂ ಅಭ್ಯರ್ಥಿಗಳು ತಮಗೆಕಡಿಮೆ ಮತ ದೊರೆತ ಬೂತುಗಳ ಕಡೆಗೆ ಹೆಚ್ಚಿನ ಗಮನ ನೀಡಲು ಅನಗತ್ಯ ಸಹಾಯ ಮಾಡಿದಂತಾಗುತ್ತದೆ ಎಂಬುದು ಚುನಾವಣಾ ಆಯೋಗದ ವಾದವಾಗಿತ್ತು.
ಇಲೆಕ್ಟ್ರಾನಿಕ್ ಮತದಾನ ಮೆಶೀನುಗಳನ್ನು ಬಳಸಲು ಆರಂಭಿಸುವ ಮುನ್ನ ಪ್ರತಿ ಚುನಾವಣೆಯಲ್ಲಿ ಚಲಾವಣೆಗೈದ ಎಲ್ಲಾ ಬ್ಯಾಲೆಟ್ ಪೇಪರುಗಳನ್ನು ಒಟ್ಟಾಗಿ ಕಲೆ ಹಾಕಿ ಎಣಿಕೆ ಮಾಡುತ್ತಿದ್ದುದರಿಂದ ಬೂತ್ ಮಟ್ಟದ ಮತ ಎಣಿಕೆ ವಿವರ ಲಭ್ಯವಾಗುತ್ತಿರಲಿಲ್ಲ.
ಆದರೆ ಕಾನೂನು ಸಚಿವರು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಪ್ರಸ್ತಾಪ ತಿರಸ್ಕರಿಸಲು ಕಾರಣವನ್ನು ನಮೂದಿಸಲಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆಗೂ ಸಚಿವರು ಲಭ್ಯರಾಗಿಲ್ಲ.
ಟೋಟೈಲಸರ್ ಮೆಶೀನುಗಳನ್ನುಉಪಯೋಗಿಸುವ ಬಗೆಗಿನ ಪ್ರಸ್ತಾಪವನ್ನು ಚುನಾವಣಾ ಆಯೋಗ 2008ರಲ್ಲಿ ಮಾಡಿತ್ತಾದರೂ ಇತ್ತೀಚೆಗೆ ಇದರ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯನ್ನು ರಚಿಸಿದ್ದರು. ಆಶ್ಚರ್ಯವೆಂಬಂತೆ ರಾಜಕೀಯ ಪಕ್ಷಗಳಲ್ಲಿ ಕೇವಲ ಕಾಂಗ್ರೆಸ್, ಬಿಎಸ್ಪಿ, ಹಾಗೂ ಎನ್‌ಸಿಪಿ ಮಾತ್ರ ಈ ಪ್ರಸ್ತಾಪದಲ್ಲಿ ಆಸಕ್ತಿ ತೋರಿಸಿದ್ದವು.







