ಯಡಿಯೂರಪ್ಪ ಕಾರ್ಯವೈಖರಿಗೆ ಶಾಸಕರ ಅಸಮಾಧಾನ

ಬೆಂಗಳೂರು, ಜ.13: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ಕಾರ್ಯವೈಖರಿಯ ಬಗ್ಗೆ ಬಿಜೆಪಿಯ ಪ್ರಮುಖ 24 ಶಾಸಕರು ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರು ಹಾಗೂ ವಕ್ತಾರರು, ಮೋರ್ಚಾಗಳ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ನೇಮಕಾತಿಯ ವೇಳೆ ನಿಮ್ಮ ಏಕಪಕ್ಷೀಯ ನಿರ್ಧಾರ ನಮಗೆ ಆಘಾತ ಉಂಟು ಮಾಡಿದೆ. ನೀವು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ನಿಮ್ಮನ್ನು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದಾಗ ನಾವೆಲ್ಲರೂ ತುಂಬಾ ಸಂತೋಷಪಟ್ಟಿದ್ದೆವು. ಇದೀಗ ಆ ಸಂತೋಷ ಪಕ್ಷದಲ್ಲಿಲ್ಲ. ಇಪ್ಪತ್ತು ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಕಡೆಗಣಿಸಿದ್ದೀರಿ. ಹಿರಿಯ ನಾಯಕ ಕೆಎಲ್ ಈಶ್ವರಪ್ಪರನ್ನು ಬರಗಾಲ ಅಧ್ಯಯನ ತಂಡದಿಂದ ಕೈಬಿಟ್ಟಿರುವುದು ಸರಿಯಲ್ಲ. ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವೆಲ್ಲನ್ನೂ ನೀವು ಸರಿಪಡಿಸಬೇಕು ಎಂದು ಬಿಜೆಪಿಯ ಸುಮಾರು 24 ಶಾಸಕರು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರಿಗೆ ಬರೆದ ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಗುರುವಾರ ಸಂಜೆ ಬಿಜೆಪಿಯ ಮಲ್ಲೇಶ್ವರಂ ಕಚೇರಿಯಲ್ಲಿ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿಯ ಎಂಎಲ್‌ಸಿಗಳ ಸಭೆ ನಡೆದಿತ್ತು. ಸಭೆಗೆ ವಿಧಾನಪರಿಷತ್‌ನಲ್ಲಿ ವಿಪಕ್ಷ್ಷ ನಾಯಕನಾಗಿರುವ ಕೆಎಸ್ ಈಶ್ವರಪ್ಪರಿಗೆ ಆಹ್ವಾನ ನೀಡಿರಲಿಲ್ಲ. ಸಭೆಯಲ್ಲಿ 24 ಎಂಎಲ್‌ಸಿಗಳ ಪೈಕಿ 9 ಮಂದಿ ಗೈರು ಹಾಜರಾಗಿದ್ದರು. ಎಂಎಲ್‌ಸಿ ವಿ.ಸೋಮಣ್ಣ ಸಭೆಗೆ ಬಂದು ಬೇಗನೆ ನಿರ್ಗಮಿಸಿದ್ದರು.





