ಶಹಬ್ಬಾಸ್ ಸುಷ್ಮಾ ಜಿ... ಆದರೆ ಅಮೆಝಾನ್ ಹಿಂದೆಗೆದುಕೊಂಡರೆ ತ್ರಿವರ್ಣ ಧ್ವಜದ ಉತ್ಪನ್ನಗಳ ಮಾರಾಟ ನಿಲ್ಲುತ್ತದೆಯೇ ?

ಹೊಸದಿಲ್ಲಿ, ಜ.13: ಅಮೆಝಾನ್ ಕೆನಡಾ ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ ಪರಿಣಾಮವನ್ನು ನಾವೆಲ್ಲಾ ನೋಡಿದ್ದೇವೆ. ಸುಷ್ಮಾ ಅವರಿಗೆ ಭೇಷ್ ಎಂದಿದ್ದೇವೆ.
ಟ್ವೀಟ್ ಕಂಡ ಕೂಡಲೇ ಕೆನಡಾದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಷ್ಮಾ ಆದೇಶಿಸಿದ್ದರು ಹಾಗೂ ಸ್ವತಹ ಅಮೆಝಾನ್ ಕಂಪೆನಿಗೆ ಎಚ್ಚರಿಕೆ ನೀಡಿ ವಿವಾದಿತ ಉತ್ಪನ್ನವನ್ನು ಹಿಂಪಡೆಯದಿದ್ದರೆ ಕಂಪೆನಿಯ ಎಲ್ಲಾ ಅಧಿಕಾರಿಗಳ ಭಾರತೀಯ ವೀಸಾ ರದ್ದುಪಡಿಸಲಾಗುವುದೆಂದು ಕಂಪೆನಿ ಬೇಷರತ್ ಕ್ಷಮೆಯಾಚಿಸಬೇಕೆಂದು ಹೇಳಿದಾಕ್ಷಣ ಕಂಪೆನಿ ತನ್ನ ವೆಬ್ ಸೈಟ್ ನಿಂದ ವಿವಾದಿತ ಉತ್ಪನ್ನಗಳನ್ನು ತೆಗೆದು ಹಾಕಿತ್ತು. ಸುಷ್ಮಾ ಅವರ ಕಾರ್ಯ ಮೆಚ್ಚಬೇಕಾದಂತಹುದ್ದೇ. ಆದರೆ ಅಮೆಝಾನ್ ಹಿಂದೆಗೆದುಕೊಂಡ ಮಾತ್ರಕ್ಕೆ ತ್ರಿವರ್ಣ ಧ್ವಜದ ಉತ್ಪನ್ನಗಳ ಮಾರಾಟ ನಿಲ್ಲುವುದೇ ಎಂಬ ಪ್ರಶ್ನೆಯಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ಗಮನಿಸಬೇಕಾದ ಮೂರು ಅಂಶಗಳಿವೆ.
- ಅಮೆಝಾನ್ ಒಂದು ಮಧ್ಯವರ್ತಿ ಇ-ಕಾಮರ್ಸ್ಟ್ ಏಜೆಂಟ್ ಆಗಿದ್ದು ಅದು ತಾನೇ ತಯಾರಿಸಿದ ಉತ್ಪನ್ನಗಳನ್ನು ಯಾವತ್ತೂ ಮಾರಾಟ ಮಾಡುವುದಿಲ್ಲ. ರಿಟೇಲರ್ ಗಳು ಹಾಗೂ ವಿವಿಧ ಬ್ರ್ಯಾಂಡುಗಳು ಅಮೆಝಾನ್ ಮೂಲಕ ತಮ್ಮ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುತ್ತಾರೆ.
- ತ್ರಿವರ್ಣ ಧ್ವಜದ ಡೋರ್ ಮ್ಯಾಟುಗಳ ಜಾಹೀರಾತುಗಳನ್ನು ತನ್ನ ವೆಬ್ ಸೈಟಿನಿಂದ ಕಂಪೆನಿ ತೆಗೆದು ಹಾಕಿದ ಮಾತ್ರಕ್ಕೆ ಕಂಪೆನಿಗಳು ಬೇರೆ ವಿಧಾನದಲ್ಲಿ ಇವುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವವೇ ?
- ಅಮೆರಿಕಾ, ಬ್ರಿಟನ್ ಮುಂತಾದ ದೇಶಗಳು ತಮ್ಮ ರಾಷ್ಟ್ರಧ್ವಜಗಳ ಚಿತ್ರಗಳನ್ನು ವಿವಿಧ ಉತ್ಪನ್ನಗಳಲ್ಲಿ, ಉದಾ: ಮಗ್, ಟೀ-ಶರ್ಟ್ ಗಳು, ಒಳ ಉಡುಪುಗಳ ಮೇಲೆ ಉಪಯೋಗಿಸಲು ಅನುಮತಿಸುತ್ತವೆ ಹಾಗೂ ಇಂತಹ ಉತ್ಪನ್ನಗಳು ಅಮೆಝಾನ್ ಅಥವಾ ಬೇರೆ ಯಾವುದೇ ಇ-ಕಾಮರ್ಸ್ ಸೈಟ್ ನಲ್ಲಿ ಮಾರಾಟ ಮಾಡಲ್ಪಟ್ಟರೆ ಅವುಗಳಿಗೆ ಆಕ್ಷೇಪ ಎತ್ತುವುದಿಲ್ಲ. ಹೀಗಿರುವಾಗ ಸುಷ್ಮಾ ಅವರು ತೆಗೆದುಕೊಂಡ ಕ್ರಮ ಆತುರದ್ದಾಗಿರಬಹುದೇ ? ಅಥವಾ ಈ ಘಟನೆ ಭಾರತ-ಕೆನಡಾ ಅಥವಾ ಸರಕಾರ ಮತ್ತು ಅಮೆಝಾನ್ ನಡುವಣ ಸಂಬಂಧಗಳನ್ನು ಬಾಧಿಸುವುದೇ?
ಹಾಗಾದಲ್ಲಿ ತ್ರಿವರ್ಣ ಧ್ವಜದ ಉತ್ಪನ್ನಗಳ ಆಫ್ ಲೈನ್ ಮಾರಾಟವಾಗುತ್ತಿದ್ದಲ್ಲಿ ಸರಕಾರ ಅದನ್ನು ಹೇಗೆ ನಿಯಂತ್ರಿಸುವುದು ಎಂಬ ಪ್ರಶ್ನೆಯೂ ಇದೆ.







