ನಾಯಕತ್ವದ ವಿಭಜನೆಯಿಂದ ಭಾರತಕ್ಕೆ ಲಾಭವಿಲ್ಲ: ಧೋನಿ

ಪುಣೆ, ಜ.13: ‘‘ಭಾರತದಲ್ಲಿ ನಾಯಕತ್ವದ ವಿಭಜನೆಯಿಂದ ಲಾಭವಿಲ್ಲ. ವಿರಾಟ್ ಕೊಹ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಇತಿಹಾಸ ಮರು ನಿರ್ಮಾಣ ಮಾಡಲಿದ್ದಾರೆ’’ ಎಂದು ಇತ್ತೀಚೆಗಷ್ಟೇ ದಿಢೀರನೆ ಸೀಮಿತ ಓವರ್‌ಗಳ ಕ್ರಿಕೆಟ್ ನಾಯಕತ್ವ ತ್ಯಜಿಸಿದ್ದ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಮೂರು ಮಾದರಿಯ ಕ್ರಿಕೆಟಿಗೆ ವಿವಿಧ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ನನ್ನ ಒಲವಿಲ್ಲ ಎಂದು ಹೇಳಿದ ಧೋನಿ,‘‘ನಾಯಕತ್ವವನ್ನು ವಿಭಜಿಸುವ ಬಗ್ಗೆ ನನ್ನ ವಿರೋಧವಿದೆ. ತಂಡಕ್ಕೆ ಒಬ್ಬನೇ ನಾಯಕನಿರಬೇಕು...ನಾಯಕತ್ವದ ವಿಭಜನೆ ಭಾರತದಲ್ಲಿ ನಡೆಯುವುದಿಲ್ಲ. ವಿರಾಟ್ ಕೊಹ್ಲಿಗೆ ಪೂರ್ಣಕಾಲಿಕ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಡಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ನನ್ನ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಈಗಿನ ತಂಡಕ್ಕಿದೆ. ನಾಯಕತ್ವ ತ್ಯಜಿಸಲು ಇದು ಸರಿಯಾದ ಸಮಯವೆಂದು ಭಾವಿಸಿದ್ದೆ’’ ಎಂದು ಹೇಳಿದ್ದಾರೆ.
‘‘ವಿರಾಟ್ ಹಾಗೂ ಅವರ ತಂಡ ನನಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲುತ್ತಾರೆ. ಇದೊಂದು ಅತ್ಯಂತ ಯಶಸ್ವಿ ತಂಡವಾಗಲಿದೆ. ಆ ರೀತಿಯ ಅನುಭವ ಹಾಗೂ ಸಾಮರ್ಥ್ಯ ಈ ತಂಡಕ್ಕಿದೆ. ಈ ತಂಡ ಟೂರ್ನಿಯ ನಾಕೌಟ್‌ನಲ್ಲಿ ಒತ್ತಡದ ಪರಿಸ್ಥಿತಿಯಲ್ಲಿ ಆಡಿದೆ. ಕೊಹ್ಲಿ ನೇತೃತ್ವದ ತಂಡ ಇತಿಹಾಸವನ್ನು ಮರು ನಿರ್ಮಿಸಲಿದೆ ಎಂಬ ಖಚಿತ ವಿಶ್ವಾಸ ನನಗಿದೆ’’ ಎಂದು ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಧೋನಿ ತಿಳಿಸಿದ್ದಾರೆ.
‘‘ಓರ್ವ ಆಟಗಾರ ತಂಡವನ್ನು ಮುನ್ನಡೆಸುವುದು ನಿರ್ಣಾಯಕ ಎನ್ನುವುದು ನನ್ನ ನಂಬಿಕೆ. ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವಹಿಸಿಕೊಂಡಾಗ ಇಂತಹ ವಿಚಾರ ನನ್ನ ಮನಸ್ಸಲ್ಲಿ ಮೂಡಿತ್ತು. ಕೊಹ್ಲಿ ಕೆಲವು ಪಂದ್ಯಗಳಲ್ಲಿ ಆಡಿ ನಾಯಕತ್ವದಲ್ಲಿ ಒಂದಷ್ಟು ಪಳಗಲಿ ಎಂದು ಬಯಸಿದ್ದೆ. ಕೊಹ್ಲಿಗೆ ಸೀಮಿತ ಓವರ್‌ಗಳ ಕ್ರಿಕೆಟ್ ನಾಯಕತ್ವ ಬಿಟ್ಟುಕೊಡಲು ಇದೊಂದು ಸರಿಯಾದ ಸಮಯವೆಂದು ಕೊನೆಗೂ ನಿರ್ಧರಿಸಿದ್ದೆ’’ ಎಂದು ಧೋನಿ ಹೇಳಿದರು.
ನಾಯಕತ್ವ ತ್ಯಜಿಸಿದ್ದರಿಂದ ತಂಡದಲ್ಲಿ ನಿಮ್ಮ ಪಾತ್ರವೇನು? ಎಂದು ಕೇಳಿದಾಗ,‘‘ನಾನು ನಿರಂತರವಾಗಿ ಕೊಹ್ಲಿ ಬಳಿ ಸಲಹೆ ಹಾಗೂ ಅಭಿಪ್ರಾಯವನ್ನು ಹಂಚಿಕೊಳ್ಳುವೆ. ವಿಕೆಟ್‌ಕೀಪರ್ ಯಾವಾಗಲೂ ತಂಡದ ಉಪ ನಾಯಕನಾಗಿರುತ್ತಾನೆ. ನಾಯಕ ಏನು ಬಯಸುತ್ತಾನೆಂದು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುವೆ. ಯಾವ ರೀತಿ ಫೀಲ್ಡಿಂಗ್ ನಡೆಸಲು ಬಯಸಿದ್ದೀರಿ ಎಂದು ಕೊಹ್ಲಿ ಬಳಿ ಈಗಾಗಲೇ ಚರ್ಚಿಸಿರುವೆ. ಕೊಹ್ಲಿ ಬಯಸಿದರೆ ಸಾಕಷ್ಟು ಸಲಹೆ ನೀಡಲು ಸದಾ ಸಿದ್ಧ’’ ಎಂದು ಧೋನಿ ಹೇಳಿದರು.







